
ಅಗ್ನಿಯ ರೆಕ್ಕೆಗಳು ಕೃತಿಯ ಮೂಲಕ ಭಾರತೀಯರಲ್ಲಿ ದೇಶ ಭಕ್ತಿಯ ಹೊಸ ಕನಸು ಬಿತ್ತಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೂ ಕರ್ನಾಟಕಕ್ಕೂ ಅವಿನಾಭಾವ ನಂಟು.
ಕಳೆದ ತಿಂಗಳು ಬೆಂಗಳೂರಿನ ಐಐಎಸ್‍ಸಿಗೆ ಆಗಮಿಸಿ ಅಲ್ಲಿನ ಸಂಶೋಧನಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಕಲಾಂ 2006ರಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣ ರಾಜ್ಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತಾಡುವಂತೆ ಅವರಿಗೆ ಆಹ್ವಾನ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಸೈಂಟಿಫಿಕ್ ಟೆಂಪರ್ಮೆಂಟ್ ಮತ್ತು ಪುರ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬಿತ್ತಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದ ಕಲಾಂ ಅವರ ಭಾಷಣದ ಮೋಡಿಗೆ ಇಡಿ ರಾಜ್ಯ ಒಳಗಾಗಿತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ ಅಬ್ದುಲ್ ಕಲಾಂ ಅವರ ಕನಸಿನ ಪುರ ಯೋಜನೆ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲೇ ಅನುಷ್ಠಾನಗೊಂಡಿದ್ದು ಇನ್ನೊಂದು ವಿಶೇಷ. ನೆರೆಯ ತಮಿಳುನಾಡಿನಲ್ಲಿ ಹುಟ್ಟಿ ಬೆಳೆದಿದ್ದ ಅಬ್ದುಲ್ ಕಲಾಂ ಅವರು ಕರ್ನಾಟಕದ ಬಗ್ಗೆ ಹೊಂದಿದ್ದ ಜ್ಞಾನ, ತಿಳಿವಳಿಕೆ ಮತ್ತು ಪ್ರೀತಿ ಈ ಭಾಷಣದಲ್ಲಿ ವ್ಯಕ್ತವಾಗಿತ್ತು.
ಮಕ್ಕಳಂತೆ ಪ್ರಶ್ನೆ ಕೇಳಿದ್ದರು: ಇದಾದ ನಂತರ ಕರ್ನಾಟಕದಲ್ಲಿ ಆಯೋಜಿಸಿದ್ದ ಐಟಿಬಿಟಿ ಮತ್ತು ಪ್ರವಾಸೋದ್ಯಮ ಪ್ರದರ್ಶನದ ಉದ್ಘಾಟನೆಗೆ ಆಗಮಿಸಿದ್ದ ಕಲಾಂ ಕರ್ನಾಟಕದ ಪ್ರವಾಸಿ ತಾಣಗಳ ಬಗ್ಗೆ ಮುಗ್ದ ಪ್ರವಾಸಿಗನಂತೆ ಅಂದಿನ ಆಯುಕ್ತ ಐ.ಎಂ. ವಿಠಲಮೂರ್ತಿ ಅವರ ಬಳಿ ಪ್ರಶ್ನೆ ಕೇಳಿದ್ದರು. ಇದೆಲ್ಲದಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಅಸಂಖ್ಯಾತ ಭಾಷಣ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ತುಮಕೂರಿನ ಸಿದ್ದಗಂಗಾ, ಮೈಸೂರಿನ ಜೆಎಸ್‍ಎಸ್ ಕಾಲೇಜು, ರಾಮಕೃಷ್ಣಾಶ್ರಮ, ಕೆಎಲ್‍ಇ ಸಂಸ್ಥೆ ಸೇರಿದಂತೆ ಹಲವೆಡೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಆದರೆ ಅವರ ಭೇಟಿ ಪ್ರತಿಷ್ಠಿತ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರುತ್ತಿರಲಿಲ್ಲ.
Advertisement