
ಕಪೂರ್ತಲಾ: ಗುರುದಾಸ್ ಪುರ ಜಲ್ಲೆಯ ವಿವಿಧೆಡೆ ಉಗ್ರರು ನಡೆಸಿದ ದಾಳಿವೇಳೆ ಪಂಜಾಬ್ ನ ಪೊಲೀಸರು ಪ್ರತಿದಾಳಿ ಮಾಡುತ್ತಿರುವ ಚಿತ್ರವೀಗ ಹಲವು ವಿವಾದಗಳಿಗೆ ಕಾರಣವಾಗಿದೆ. ಉಗ್ರರ ದಾಳಿಗೆ ಪ್ರತಿದಾಳಿ ಮಾಡುತ್ತಿರುವ ನಮ್ಮ ಭದ್ರತಾ ಪೊಲೀಸರಿಗೆ ಯಾವುದೇ ರೀತಿಯ ರಕ್ಷಣಾ ಕವಚವಿಲ್ಲದಿರುವುದು ಹಾಗೂ ಕೈಯಲ್ಲಿರುವ ಕಳಪೆ ಮಟ್ಟದ ಶಸ್ತ್ರಾಸ್ತ್ರಗಳು ಇದೀಗ ವಿವಾದ ಸೃಷ್ಟಿಯಾಗಲು ಕಾರಣವಾಗಿದೆ.
ಗುರುದಾಸ್ ಪುರದ ಬಳಿ ಜು.27 ರಂದು ಭದ್ರತಾ ಸಿಬ್ಬಂದಿಗಳ ಸಮವಸ್ತ್ರ ಧರಿಸಿ ಬಂದ ಉಗ್ರರ ಗುಂಪೊಂದು ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಪಂಜಾಬ್ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳನ್ನು ಹಿಡಿದು ಉಗ್ರರ ದಾಳಿಗೆ ಪ್ರತಿದಾಳಿ ಮಾಡಿದ್ದಾರೆ. ಆದರೆ, ಪ್ರತಿದಾಳಿ ಮಾಡುತ್ತಿರುವ ನಮ್ಮ ಪೊಲೀಸರು ಯಾವುದೇ ರೀತಿಯ ಗುಂಡು ನಿರೋಧಕ ಜಾಕೆಟ್ ಗಳನ್ನು ಧರಿಸಿಲ್ಲ. ಅಲ್ಲದೇ, ಪ್ರತಿದಾಳಿ ಮಾಡಲು ಬಳಸುತ್ತಿರುವ ಶಸ್ತ್ರಾಸ್ತ್ರಗಳು ಕಳಪೆ ಮಟ್ಟದಾಗಿದ್ದು, ಅಭದ್ರತೆಯ ಸ್ಥಿತಿಯಲ್ಲಿ ಪೊಲೀಸರರಿವುದು ಕಂಡು ಬಂದಿದೆ. ಈ ಫೋಟೋ ಇದೀಗ ಪಂಜಾಬ್ ಸರ್ಕಾರವನ್ನು ವಿವಾದಕ್ಕೆ ಸಿಲುಕುವಂತೆ ಮಾಡಿದ್ದು, ಪಂಜಾಬ್ ಸರ್ಕಾರದ ವಿರುದ್ಧ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.
ಪೊಲೀಸರ ಅಭದ್ರತೆ ಹಾಗೂ ಕಳಪೆ ಶಸ್ತ್ರಾಸ್ತ್ರಗಳ ಕುರಿತಂತೆ ಇತ್ತ ಚರ್ಚೆಗಳು ಹಾಗೂ ವಿವಾದಗಳು ಪ್ರಾರಂಭವಾಗುತ್ತಿದ್ದರೆ. ಅತ್ತ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಈ ರೀತಿಯ ಘಟನೆ ನಡೆದು 15-16 ವರ್ಷಗಳಾಗಿವೆ. ಪೊಲೀಸರಿಗೆ ಗುಂಡು ನಿರೋಧಕ ಜಾಕಟ್ ಇಲ್ಲದಿರುವುದು, ಕಳಪೆ ಶಸ್ತ್ರಾಸ್ತ್ರಗಳನ್ನೇ ಉಪಯೋಗಿಸುತ್ತಿರುವುದು ಇದು ಹೊಸದೇನಲ್ಲ. ಹಲವು ವರ್ಷಗಳಿಂದಲೂ ಇದು ಹೀಗೆಯೇ ಇದೆ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಗುರುದಾಸ್ ಪುರದಲ್ಲಿ ಉಗ್ರರು ನಡೆಸಿದ ದಾಳಿ ಸತತ 12 ಗಂಟೆಗಳ ಕಾಲ ನಡೆದಿತ್ತು. ಪಾಕಿಸ್ತಾನದಿಂದ ಬಂದ ಉಗ್ರರು ದಾಳಿವೇಳೆ ಎಕೆ 47 ಬಳಸಿದ್ದರಲ್ಲದೇ, ಪೊಲೀಸರ ಮೇಲೆ ಗ್ರೆನೇಡ್ ದಾಳಿಯನ್ನು ಮಾಡಿದ್ದರು. ಉಗ್ರರ ದಾಳಿಯಲ್ಲಿ ಪಂಜಾಬ್ ನ ಹಿರಿಯ ಪೊಲೀಸ್ ಅಧಿಕಾರಿ ಬಲ್ಜೀತ್ ಸಿಂಗ್ ಸೇರಿದಂತೆ 3 ಪೊಲೀಸರು ಹಾಗೂ ಮೂವರು ನಾಗರೀಕರು ಮೃತಪಟ್ಟಿದ್ದರು.
ಘಟನೆಯಲ್ಲಿ ಸಾವನ್ನಪ್ಪಿದ್ದ ಮೃತರ ಕುಟುಂಬಗಳಿಗೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಈಗಾಗಲೇ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಘಟನೆಯು ನಮಗೆ ಸರಿಯಾದ ಪಾಠ ಹೇಳಿಕೊಟ್ಟಿದೆ. ಕಳಪೆ ಶಸ್ತ್ರಾಸ್ತ್ರಗಳ ಕುರಿತಂತೆ ಬಂದಿರುವ ದೂರುಗಳನ್ನು ಸ್ವೀಕರಿಸಲಾಗಿದ್ದು, ಕೂಡಲೇ ಈ ಕುರಿತಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Advertisement