ಯಾಕುಬ್ ಮೇಲ್ಮನವಿ: ವಿಶೇಷ ಪೀಠದಿಂದ ಇಂದು ವಿಚಾರಣೆ

ಗಲ್ಲು ಶಿಕ್ಷೆ ಮಹೂರ್ತಕ್ಕೆ ಎರಡು ದಿನವಿರುವಾಗ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳ ಪರಸ್ಪರ ವ್ಯತಿರಿಕ್ತ ತೀರ್ಪಿನ ಹಿನ್ನೆಲೆಯಲ್ಲಿ ಯಾಕೂಬ್ ಮೆಮನ್ ...
ಯಾಕೂಬ್ ಮೆಮನ್
ಯಾಕೂಬ್ ಮೆಮನ್

ನವದೆಹಲಿ: ಗಲ್ಲು ಶಿಕ್ಷೆ ಮಹೂರ್ತಕ್ಕೆ ಎರಡು ದಿನವಿರುವಾಗ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳ ಪರಸ್ಪರ ವ್ಯತಿರಿಕ್ತ ತೀರ್ಪಿನ ಹಿನ್ನೆಲೆಯಲ್ಲಿ ಯಾಕೂಬ್ ಮೆಮನ್ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ಉನ್ನತ ಪೀಠಕ್ಕೆ ವರ್ಗಾಯಿಸಿದೆ. ಅದಕ್ಕೆ ಪೂರಕವಾಗಿ ಮಂಗಳವಾರ ನ್ಯಾಯಮೂರ್ತಿ ಎಚ್.ಎಲ್ ದತ್ತು ತ್ರಿಸದಸ್ಯ ಪೀಠದ ನ್ಯಾಯಪೀಠ ರಚಿಸಿದ್ದಾರೆ.  ನ್ಯಾ. ದೀಪಕ್ ಮಿಶ್ರಾ, ನ್ಯಾ. ಪ್ರಪುಲ್ಲಾ ಸಿ.ಪಂಥ್ ಮತ್ತು ನ್ಯಾ.ಅಮಿತಾವ್ ರಾಯ್ ಹೊಸ ಪೀಠದಲ್ಲಿದ್ದಾರೆ.

ಈ ನಡುವೆ, ಮೇಲ್ಮನವಿ ಕುರಿತ ತೀರ್ಪು ಮತ್ತು ಗಲ್ಲು ಶಿಕ್ಷೆ ಜಾರಿ ನಡುವೆ ಅಂತರವಿರಬೇಕು ಎಂಬ ಸುಪ್ರೀಂಕೋರ್ಟ್ ಹಳೆಯ ತೀರ್ಪಿನ ಹಿನ್ನೆಲೆಯಲ್ಲಿ ಜು.30ಕ್ಕೆ ಯಕುಬ್ ಮೆಮನ್ ಗಲ್ಲಿಗೇರುವುದು ಅನುಮಾನಾಸ್ಪದವಾಗಿದೆ. ಮಂಗಳವಾರ ಯಾಕುಬ್ ಮೆಮನ್  ಗಲ್ಲುಶಿಕ್ಷೆ ತಡೆಯಾಜ್ಞೆ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಪರಸ್ಪರ ಭಿನ್ನ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಿರುವ ಮುಖ್ಯ ನಾಯಮೂರ್ತಿ ಎಚ್. ಎಲ್. ದತ್ತು ಅವರು ಅರ್ಜಿಯನ್ನು ಮೂವರು ನ್ಯಾಯಮೂರ್ತಿಗಳ ಉನ್ನತಪೀಠಕ್ಕೆ ವರ್ಗಾಯಿಸಿದ್ದಾರೆ. ಇದೀಗ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಬುಧವಾರ ಯಾಕೂಬ್ ಮೇಲ್ಮನವಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಈ ನಡುವೆ ಯಾಕುಬ್ ಮೆಮನ್ ಸಲ್ಲಿಸಿದ್ದ ಗಲ್ಲು ಶಿಕ್ಷೆ ತಡೆಯಾಜ್ಞೆ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅನಿಲ್.ಆರ್. ದವೆ ಮತ್ತು ನ್ಯಾ.ಕುರಿಯನ್ ಜೋಸೆಫ್  ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ  ವಿಷಯದಲ್ಲಿ ಪರಸ್ಪರ ವ್ಯತಿರಿಕ್ತ ತೀರ್ಪು ಪ್ರಕಟಿಸಿ, ಮುಖ್ಯ ನ್ಯಾಯಮೂರ್ತಿಗಳ ಮಧ್ಯಪ್ರವೇಶಕ್ಕೆ ಕೋರಿತ್ತು. ನ್ಯಾ. ದವೆ ಅವರು ಮೇಲ್ಮನವಿಯನ್ನು ವಜಾ ಮಾಡಿದರೆ, ನ್ಯಾ. ಕುರಿಯನ್ ಜು.30ರಂದು ನಿಗದಿಯಾಗಿದ್ದ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿದ್ದರು. ಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಮತ್ತು ಮೆಮನ್ ಪರ ವಕೀಲ ರಾಜು ರಾಮಚಂದ್ರನ್ ಇಬ್ಬರು ನ್ಯಾಯಮೂರ್ತಿಗಳು ಗಲ್ಲು ಶಿಕ್ಷೆಗೆ ತಡಯಾಜ್ಞೆ ನೀಡುವ ಬಗ್ಗೆ  ಪರಸ್ಪರ ಭಿನ್ನ ತೀರ್ಪು ನೀಡಿರುವುದರಿಂದ ಕಾನೂನು ಏಕತೆ ಇಲ್ಲದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ದ್ವಿಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ತುರ್ತಾಗಿ ಪರಿಗಣಿಸುವಂತೆ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರಿಗೆ ಕೋರಿತ್ತು.


ನ್ಯಾ. ದವೆ ಹೇಳಿದ್ದು

  • ಯಾಕೂಬ್ ಕ್ಷಮಾದಾನ ಅರ್ಜಿಯನ್ನು ಗಲ್ಲುಶಿಕ್ಷೆಯ ಗಡುವಿಗಿಂತ ಮುನ್ನ ಇತ್ಯರ್ಥಪಡಿಸುವುದು ಮಹಾರಾಷ್ಟ್ರ ರಾಜ್ಯಪಾಲರಿಗೆ ಬಿಟ್ಟ ವಿಷಯ.
  • ಕ್ಷಮಿಸಿ, ನಾನು ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡುವ ತೀರ್ಪಿನ ಭಾಗವಾಗಲಾರೆ.
  • ಸಿಜೆ ಅವರೇ ಈ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿ.
  • 'ರಾಜನಾದವನು ದುಷ್ಟನನ್ನು ಕಠೋರ ಮನಸ್ಸಿನಿಂದ ದಂಡಿಸದೇ ಇದ್ದರೆ, ದುಷ್ಟನ ಪಾಪ ರಾಜನನ್ನೇ ಸುತ್ತಿಕೊಳ್ಳುವುದು' ಎಂಬ ಶ್ಲೋಕ ನೆನಪಿಸಿಕೊಳ್ಳುತ್ತೇನೆ.
ನ್ಯಾ. ಕುರಿಯನ್ ಹೇಳಿದ್ದು
  • ಯಾಕುಬ್ ಸಲ್ಲಿಸಿದ್ದ ಕುರೇಟಿವ್ ಅರ್ಜಿ ವಿಚಾರಣೆ ವೇಳೆ ನಿಯಮ ಪಾಲನೆ ಲೋಪವಾಗಿರುವುದರಿಂದ ನ್ಯಾ. ದವೆ ಯವರ ತೀರ್ಪು ಒಪ್ಪಿಕೊಳ್ಳಲಾಗದು.
  •  
  • ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವೇ ರೂಪಿಸಿದ ನಿಯಮ ಪಾಲನೆ ಆಗಿಲ್ಲ.
  • ಆ ಮೂಲಕ ಒಬ್ಬ ಮನುಷ್ಯನ ಸಾವು-ಬದುಕಿನ ಪ್ರಶ್ನೆ ಅಡಗಿರುವ ಮಹತ್ವದ ಅರ್ಜಿಯನ್ನು ವಿಚಾರಣೆ ವೇಳೆ ಸಂವಿಧಾನದ 21ನೇ ಪರಿಚ್ಛೇದದಡಿಯ ಬದುಕಿನ ಹಕ್ಕನ್ನೇ ಉಲ್ಲಂಘಿಸಲಾಗಿದೆ.
  • ನ್ಯಾ. ಚಲಮೇಶ್ವರ್ ಹಾಗೂ ನ್ಯಾ. ದವೆ ಮೂವರು ಸದಸ್ಯರ ಪೀಠದ ಮುಂದೆ ಕುರೇಟಿವ್ ಅರ್ಜಿ ಬಂದಿದ್ದರೂ, ಅದರ ಅಂತಿಮ ತೀರ್ಪು ನೀಡುವಾಗ ತಮ್ಮನ್ನೂ ಸೇರಿ ಇತರ ಇಬ್ಬರನ್ನು ಹೊರತುಪಡಿಸಿ ನ್ಯಾ. ದವೆ ತೀರ್ಪು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಮೆಮನ್‍ನ ಕುರೇಟಿವ್ ಅರ್ಜಿ ಪುನರ್ ಪರಿಶೀಲಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com