ರಾಷ್ಟ್ರಪತಿಯಿಂದ ಕ್ಷಮಾದಾನ ಅರ್ಜಿ ತಿರಸ್ಕಾರ: ಯಾಕೂಬ್ ಮೆಮನ್ ಗೆ ಗಲ್ಲು

1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಯಾಕೂಬ್ ಮೆಮನ್ ಎರಡನೇ ಬಾರಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದಾರೆ.
ಯಾಕೂಬ್ ಮೆಮನ್
ಯಾಕೂಬ್ ಮೆಮನ್
ನವದೆಹಲಿ: 1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಯಾಕೂಬ್ ಮೆಮನ್ ಎರಡನೇ ಬಾರಿ ಸಲ್ಲಿಸಿದ್ದ  ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದಾರೆ. ನಿಗದಿಯಂತೆಯೇ ಗುರುವಾರ ಬೆಳಿಗ್ಗೆ ನಾಗ್ಪುರ ಜೈಲಿನಲ್ಲಿ ಯಾಕೂಬ್ ಮೆಮನ್ ಗೆ ಗಲ್ಲುಶಿಕ್ಷೆ ವಿಧಿಸಲಾಗುತ್ತದೆ. 

ಕ್ಷಮಾದಾನ ಅರ್ಜಿ ಬಗ್ಗೆ ಚರ್ಚೆ ನಡೆಸಲು ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ರಾಜನಾಥ್ ಸಿಂಗ್ ಯಾಕೂಬ್ ಮೆಮನ್ ಗೆ ಗಲ್ಲುಶಿಕ್ಷೆ ವಿಧಿಸುವ ಬಗ್ಗೆ ಪುನರ್ ಪರಿಶೀಲನೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. 

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಸತತ 2 ಗಂಟೆಗಳ ಕಾಲ ಯಾಕೂಬ್ ಮೆಮನ್ ಅರ್ಜಿ ಬಗ್ಗೆ ಚರ್ಚೆ ನಡೆಸಿದ್ದರು. ಸಚಿವ ಸಂಪುಟದ ಸಲಹೆಯನ್ನು ಪರಿಗಣಿಸಿರುವ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. 

ಇದಕ್ಕೂ ಮುನ್ನ ಗಲ್ಲು ಶಿಕ್ಷೆ ಪ್ರಶ್ನಿಸಿ ಯಾಕೂಬ್ ಮೆಮನ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದನು. ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಡಿ.ಮಿಶ್ರಾ, ನ್ಯಾ.ಪಿ.ಸಿ ಪಂತ್ ನೇತೃತ್ವದ ವಿಸ್ತೃತ ಪೀಠ ಅರ್ಜಿಯನ್ನು ವಜಾಗೊಳಿಸಿತ್ತು. ಈ ಮೂಲಕ ಯಾಕೂಬ್ ಮೆಮನ್ ಕಾನೂನು ಹೋರಾಟದ ಕೊನೇ ಅವಕಾಶದಲ್ಲೂ ಸೋಲು ಕಂಡಂತಾಗಿದೆ.
ನಿನ್ನೆ ಯಾಕೂಬ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ದ್ವಿಸದಸ್ಯ ಪೀಠದ ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯ ಉಂಟಾದ ಹಿನ್ನಲೆಯಲ್ಲಿ ಅರ್ಜಿ ವಿಚಾರಣೆಯನ್ನು  ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಾಪೀಠಕ್ಕೆ ವರ್ಗಾವಣೆ ಮಾಡಿ, ಗಲ್ಲು ಶಿಕ್ಷೆಗೆ ತಡೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com