ಆದಿಕೇಸವನ್ ಅವರ ಮಳಿಗೆಯಲ್ಲಿ ನೇತು ಹಾಕಿರುವ ಕಲಾಂ ಹಸ್ತಾಕ್ಷರವಿರುವ ಚೆಕ್
ಆದಿಕೇಸವನ್ ಅವರ ಮಳಿಗೆಯಲ್ಲಿ ನೇತು ಹಾಕಿರುವ ಕಲಾಂ ಹಸ್ತಾಕ್ಷರವಿರುವ ಚೆಕ್

ಆದಿಕೇಸವನ್ ಹೇಳಿದ ''ಕಲಾಂ ಚೆಕ್'' ನ ಪ್ರಸಂಗ

ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಯಾರ ಬಳಿಯಿಂದಲೂ ಉಚಿತವಾಗಿ ಯಾವ ವಸ್ತುವನ್ನೂ ತೆಗೆದುಕೊಳ್ಳುತ್ತಿರಲಿಲ್ಲ...
Published on

ಕೊಯಂಬತ್ತೂರು: ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಯಾರ ಬಳಿಯಿಂದಲೂ ಉಚಿತವಾಗಿ ಯಾವ ವಸ್ತುವನ್ನೂ ತೆಗೆದುಕೊಳ್ಳುತ್ತಿರಲಿಲ್ಲ ಎಂಬುದಕ್ಕೆ ಈ ಸ್ವೀಕರಿಸುತ್ತಿರಲಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ತಾವು ಉಚಿತವಾಗಿ ಗ್ರೈಂಡರ್ ನೀಡಲು ಮುಂದಾದಾಗ ನಿರಾಕರಿಸಿ ಅದಕ್ಕೆ ಹಣ ನೀಡಿದ ಸಂದರ್ಭವನ್ನು ಕೊಯಮತ್ತೂರಿನ ಸೌಭಾಗ್ಯ ಗ್ರೈಂಡರ್ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ವಿ.ಆದಿಕೇಸವನ್ ನೆನಪು ಮಾಡಿಕೊಳ್ಳುತ್ತಾರೆ.

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಘಟನೆಯನ್ನು ವಿವರಿಸಿದ ಆದಿಕೇಸವನ್, ಕಳೆದ ವರ್ಷ ಕಲಾಂ ಅವರು ಸೌಭಾಗ್ಯ ಎಂಟರ್ ಪ್ರೈಸಸ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇರೋದ್ ಗೆ ಬಂದಿದ್ದರಂತೆ. ಕಾರ್ಯಕ್ರಮದಲ್ಲಿ ಗ್ರೈಂಡರ್ ನ್ನು ಉಡುಗೊರೆಯಾಗಿ ಆಯೋಜಕರು ನೀಡಿದರಂತೆ. ಆದರೆ ಅದನ್ನು ನಯವಾಗಿ ತಿರಸ್ಕರಿಸಿದ ಕಲಾಂ, ತನ್ನ ಕುಟುಂಬದವರಿಗೆ ಒಂದು ಗ್ರೈಂಡರ್ ಅವಶ್ಯಕತೆಯಿದೆ, ಆದರೆ ಅದಕ್ಕೆ ನಾನು ಹಣ ನೀಡುತ್ತೇನೆ ಎಂದು ಹೇಳಿ ಹೋದರಂತೆ. ಸ್ವಲ್ಪ ದಿನ ಕಳೆದ ನಂತರ ಕಲಾಂ ಕಡೆಯ ಒಬ್ಬ ವ್ಯಕ್ತಿ ಮಳಿಗೆಗೆ ಬಂದು ಆಗಸ್ಟ್ 25, 2014ರ ದಿನಾಂಕ ನಮೂದಿಸಿದ ಚೆಕ್ ನೀಡಿ ಗ್ರೈಂಡರ್ ತೆಗೆದುಕೊಂಡು ಹೋದರಂತೆ.

ಆದಿಕೇಸವನ್ ಅವರಿಗೆ ಕಲಾಂ ಬಳಿಯಿಂದ ಹಣ ತೆಗೆದುಕೊಳ್ಳಲು ಸುತಾರಾಂ ಇಷ್ಟವಿರಲಿಲ್ಲ. ಚೆಕ್ ನ್ನು ಬ್ಯಾಂಕಿಂಗೆ ತೆಗೆದುಕೊಂಡು ಹೋಗಿ ಠೇವಣಿ ಮಾಡದೆ ಹಾಗೆಯೇ ಇಟ್ಟುಕೊಂಡರು. ಈ ವಿಷಯ ಕಲಾಂಗೆ ಗೊತ್ತಾಯಿತು.``ನೀವು ದುಡ್ಡು ತೆಗೆದುಕೊಳ್ಳದಿದ್ದರೆ ನಾನು ಗ್ರೈಂಡರ್ ವಾಪಾಸ್ ಮಾಡುತ್ತೇನೆ'' ಎಂದು ಆದಿಕೇಸವನ್ ಗೆ ಹೇಳಿದರಂತೆ. ಒಂದು ತಿಂಗಳು ಕಳೆದರೂ ಚೆಕ್ ನ್ನು ಹಾಗೆಯೇ ಇಟ್ಟುಕೊಂಡಿದ್ದರು. ಆಗ ಒಂದು ದಿನ ಕಲಾಂ ಅವರ ಕಛೇರಿಯಿಂದ ಫೋನ್ ಬಂತು. ''ನೀವು ಚೆಕ್ ನ್ನು ಬ್ಯಾಂಕಿನಲ್ಲಿ ಠೇವಣಿ ಮಾಡದಿದ್ದರೆ ಗ್ರೈಂಡರ್ ನ್ನು ವಾಪಾಸ್ಸು ಪಡೆದುಕೊಳ್ಳಬೇಕಾಗುತ್ತದೆ'' ಎಂದು.

ಕೊನೆಗೆ ಅನಿವಾರ್ಯವಾಗಿ ಆದಿಕೇಸವನ್ ಒಲ್ಲದ ಮನಸ್ಸಿನಿಂದಲೇ ಚೆಕ್ ನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿದರು. ಆಗ, ಈ ಶ್ರೇಷ್ಠ ಅಣು ವಿಜ್ಞಾನಿಯ ಹಸ್ತಾಕ್ಷರದಿಂದ ಬರೆದುಕೊಟ್ಟ ಚೆಕ್ ನೆನಪಿಗೆ ಇರಲಿ ಎಂದು ಅದನ್ನು ಸ್ಕ್ಯಾನ್ ಮಾಡಿಸಿ ಫ್ರೇಮ್ ಹಾಕಿಸಿ ಒಂದು ಪ್ರತಿಯನ್ನು ಇಟ್ಟುಕೊಂಡು ಇನ್ನೊಂದನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಠೇವಣಿ ಮಾಡಿ ಬಂದರು.ಅದಕ್ಕೆ ಕಲಾಂ ಅವರ ಕಡೆಯಿಂದ ಧನ್ಯವಾದ ಸಂದೇಶವೂ ಬಂತು.

ಆದಿಕೇಸವನ್ ತಮ್ಮ ಮಳಿಗೆಯಲ್ಲಿ ಚೆಕ್ ನ ಪ್ರತಿಯನ್ನು ನೇತುಹಾಕಿದ್ದಾರೆ.ಕಲಾಂ ಅವರು ನಿಧನಗೊಂಡ ಈ ಸಂದರ್ಭದಲ್ಲಿ ಆದಿಕೇಸವನ್ ಈ ವಿಷಯವನ್ನು ಪ್ರಸ್ತಾಪಿಸಿದರು. ''ಕಲಾಂ ಅವರ ಹಸ್ತಾಕ್ಷರದ ಈ ಚೆಕ್ ನಿಜಕ್ಕೂ ನನ್ನ ಜೀವನದಲ್ಲಿ ಸಂಗ್ರಹಿಸಿಡುವ ಮಹಾನ್ ಸಂಪತ್ತು. ಅವರೊಬ್ಬ ಅದ್ಭುತ ವ್ಯಕ್ತಿ'' ಎಂದು  ಆದಿಕೇಸವನ್ ವರ್ಣಿಸುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com