
ನವದೆಹಲಿ; ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಪಹ್ಲಾಜ್ ನಿಹಲಣಿ ಅವರು ಅಧಿಕಾರ ವಹಿಸಿಕೊಂಡ ಕೂಡಲೆ, ಮಂಡಳಿಯು ಕಳಿಸಿದ್ದ ವಿವಾದಾತ್ಮಕ ಆಕ್ಷೇಪಾರ್ಹ ಮತ್ತು ನಿಂದನಾ ಪದಗಳ ಪಟ್ಟಿಯನ್ನು ವಾಪಸ್ ಪಡೆಯಲಾಗಿದೆ.
ಸೆನ್ಸಾರ್ ಮಂಡಳಿಯ ಬಹುತೇಕ ಸದಸ್ಯರು ಈ ಪದಗಳ ಮೇಲಿನ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಡಳಿ ಅಧ್ಯಕ್ಷರು ಈ ಕ್ರಮ ಕೈಗೊಂಡಿದ್ದಾರೆ.
ನಿನ್ನೆ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಚಿತ್ರದಲ್ಲಿನ ಸಂದರ್ಭಗಳನ್ನು ನೋಡಿಕೊಂಡು ಆ ಪದಗಳನ್ನು ನಿಷೇಧಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಬೇಕು ಎಂದು ಬಹುತೇಕ ಸದಸ್ಯರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಬಹುತೇಕ ಸದಸ್ಯರು ಪದಗಳ ಪಟ್ಟಿಯನ್ನು ಹಿಂತೆಗೆದುಕೊಳ್ಳಬೇಕೆಂದು ಅಭಿಪ್ರಾಯ ಸೂಚಿಸಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ನಿಹಲಣಿ ಸಭೆಯ ಬಳಿಕ ತಿಳಿಸಿದರು.
ಆಕ್ಷೇಪಾರ್ಹ "ಮತ್ತು" ನಿಂದನಾ ಪದಗಳ ಪಟ್ಟಿ ಬಹಿರಂಗವಾದ ನಂತರ ಅವುಗಳನ್ನು ನಿಷೇಧಿಸಬಾರದು ಎಂದು ಮಂಡಳಿ ಭಾರೀ ದೊಡ್ಡ ವಿವಾದ ಎದುರಿಸಿತ್ತು. ಬಳಿಕ ಸದಸ್ಯರಲ್ಲಿ ಅಭಿಪ್ರಾಯ ಕೇಳಲಾಯಿತು. ಪದಗಳ ನಿಷೇಧಕ್ಕೆ ಚಲನಚಿತ್ರ ನಿರ್ಮಾಪಕರಿಂದ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದಿಂದಲೂ ವಿರೋಧ ಕೇಳಿಬಂದಿತ್ತು.
ನಿರ್ದಿಷ್ಟ ಶುಲ್ಕ ಕಟ್ಟಿ ತಮ್ಮ ಚಲನಚಿತ್ರಗಳಿಗೆ ಶೀಘ್ರ ಪ್ರಮಾಣಪತ್ರ ದೊರೆಯಲು ಅನುಕೂಲವಾಗುವ ತತ್ಕಾಲ್ ವ್ಯವಸ್ಥೆಯನ್ನು ಜಾರಿಗೆ ತರಲು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.
Advertisement