
ನವದೆಹಲಿ: 1993ರ ಮುಂಬೈ ಸರಣಿ ಸ್ಪೋಟದ ರುವಾರಿ ಉಗ್ರ ಯಾಕುಬ್ ಮೆಮನ್ ಪತ್ನಿ ರಹೀನಾ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕೆಂದು ಹೇಳಿ ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಮೊಹಮ್ಮದ್ ಫಾರೂಕ್ ಘೋಸಿ ಶನಿವಾರ ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.
ಮೊಹಮ್ಮದ್ ಫಾರೂಕ್ ಘೋಸಿ ಬರೆದಿರುವ ಪತ್ರವೀಗ ವಿವಾದಕ್ಕೆ ಕಾರಣವಾಗಿದ್ದು, ಪತ್ರದಲ್ಲಿ ಯಾಕುಬ್ ಜೈಲಿಗೆ ಸೇರಿದಾಗಿನಿಂದ ಆತನ ಪತ್ನಿ ರಹೀನಾ ಹಲವು ವರ್ಷಗಳಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಇದೀಗ ಯಾಕುಬ್ ನನ್ನು ಗಲ್ಲಿಗೇರಿಸಲಾಗಿದ್ದು, ಆಕೆಗೆ ಸರ್ಕಾರದ ಸಹಾಯದ ಅಗತ್ಯವಿದೆ. ರಹೀನಾಳಂತೆಯೇ ಇನ್ನು ಸಾಕಷ್ಟು ಮಂದಿ ಮುಸ್ಲಿಂಮರು ಸಂಕಷ್ಟದಲ್ಲೇ ಈಗಲೂ ಕಾಲ ಕಳೆಯುತ್ತಿದ್ದು, ಅಸಹಾಯಕ ಮುಸ್ಲಿಂಮರನ್ನು ಪ್ರತಿನಿಧಿಸಲು ರಹೀನಾರನ್ನು ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಈ ರೀತಿಯ ಪತ್ರವನ್ನು ಪಕ್ಷದ ಮುಖ್ಯಸ್ಥರಿಗೆ ಬರೆಯುವುದು ಸರಿಯಲ್ಲ ಹಾಗೂ ಪತ್ರ ಬರೆಯಲು ಇದು ಸರಿಯಾದ ಸಮಯವಲ್ಲ ಎಂದು ನನಗೆ ತಿಳಿದಿದೆ. ಆದರೆ, ರಹೀನಾ ಅವರ ಕಷ್ಟ ನೋಡುತ್ತಿದ್ದರೆ ಪತ್ರ ಬರೆಯಲೇಬೇಕಾಗಿ ಬಂತು. ಅಸಹಾಯಕರಿಗೆ ನೀವು ಯಾವಾಗಲೂ ಸಹಾಯ ಹಸ್ತ ನೀಡುತ್ತೀರಿ. ಹೀಗಾಗಿ ರಹೀನಾ ಕೂಡ ಇದೀಗ ಅಸಹಾಯಕ ಹೆಣ್ಣುಮಗಳಾಗಿದ್ದು, ಅವರಿಗೆ ಸಹಾಯ ಮಾಡಬೇಕೆಂದು ಮೊಹಮ್ಮದ್ ಫಾರೂಕ್ ಅವರು ಮನವಿ ಮಾಡಿದ್ದಾರೆ.
Advertisement