
ನವದೆಹಲಿ: ಪಕ್ಷದ ಸಂಸದರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗೆ ಕಿಡಿಕಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನನ್ನ ಪರವಾಗಿ ನಿಲ್ಲುವವರು ಹಾಗೂ ಹೊಗಳುವವರ ಮಾತುಗಳನ್ನು ಬಿಟ್ಟು, ನನ್ನ ಕೆಲಸ ಹಾಗೂ ನಿರ್ಧಾರಗಳನ್ನು ತುಲನೆ ಮಾಡಿ. ಆ ನಂತರ ನನ್ನ ಕುರಿತಂತೆ ನಿರ್ಧಾರ ಹೇಳಿ ಎಂದು ಮಂಗಳವಾರ ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷ ತಲೆತಗ್ಗಿಸುವಂತೆ ಮಾಡುತ್ತಿರುವ ಸಂಸದರ ಕುರಿತಂತೆ ನಿನ್ನೆ ನಡೆದ ಮುಸ್ಲಿ ಸಮುದಾಯ ನಾಯಕರ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಅವರು, ಸಮುದಾಯಗಳ ನಡುವೆ ದ್ವೇಷ ಬಿತ್ತನೆ ಮಾಡುವುದನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ನಮ್ಮ ಪಕ್ಷ 125 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದು, ಪ್ರತಿಯೊಬ್ಬ ಭಾರತೀಯನಿಗೂ ಭದ್ರತೆ, ಸೌಲಭ್ಯ ನೀಡುವುದಾಗಿ ಪ್ರಮಾಣ ಮಾಡಿದೆ. ಹಾಗಾಗಿ ಜನರ ಶ್ರೇಯೋಭಿವೃದ್ಧಿಗಾಗಿ ಪಕ್ಷ ಎಂದಿಗೂ ಶ್ರಮಿಸಬೇಕು.
ನಮ್ಮ ದೇಶದಲ್ಲಿ ಎಲ್ಲಾ ಧರ್ಮೀಯರಿಗೂ ಸಮಾನ ಹಕ್ಕಿದೆ. ಕಾನೂನಿನ ದೃಷ್ಟಿಯಲ್ಲಿ ಮಾತ್ರವಲ್ಲದೇ, ಸಮಾಜದ ಎದುರಿಗೂ ಎಲ್ಲರೂ ಸಮಾನರಾಗಿರುತ್ತಾರೆ. ಪಕ್ಷ ಯಾವಾಗಲೂ ಸರ್ಕಾರದ ಅಭಿವೃದ್ಧಿ ಹಾಗಾ ಆಡಳಿತದತ್ತ ಗಮನ ಹರಿಸುತ್ತದೆ. ಪಕ್ಷದ ಗುರಿ ಏನಿದ್ದರು ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯತ್ತ ಮಾತ್ರ ಇರಬೇಕೇ ಹೊರತು, ವಿವಾದ ಸೃಷ್ಟಿಸುವ, ದ್ವೇಷ ಬಿತ್ತುವ ಹೇಳಿಕೆಗಳ ಕಡೆ ಅಲ್ಲ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದವರಿಗೆ ಜಾರಿಯಲ್ಲಿರುವ ಹಲವು ಯೋಜನೆಗಳು ತಲುಪುತ್ತಿಲ್ಲ ಎಂಬ ಸಮುದಾಯಗಳ ದೂರು ಕುರಿತಂತೆ ಮಾತನಾಡಿದ ಅವರು, ಈ ಸಮಸ್ಯೆಯು ಸರ್ಕಾರದ ಗಮನಕ್ಕೆ ಬಂದಿದ್ದು, ಸಮಸ್ಯೆ ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಾಧ್ಯವಾದಷ್ಟು ಬೇಗ ಯೋಜನೆಗಳು ಮುಸ್ಲಿಂ ಸಮುದಾಯಕ್ಕೆ ದೊರಕುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಮುಸ್ಲಿಂ ಸಮುದಾಯದಿಂದ ವೋಟ್ ಬ್ಯಾಂಕ್ ನಡೆಯುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಮುಸ್ಲಿಂ ಸಮುದಾಯಗಳು, ನಾವು ವೋಟ್ ಬ್ಯಾಂಕ್ ರಾಜಕಾರಣವನ್ನು ಎಂದಿಗೂ ನಂಬಿಲ್ಲ. ಅಭಿವೃದ್ಧಿ ಕಾರ್ಯಗಳತ್ತ ನಮ್ಮ ಗಮನವಿದೆ ಎಂದು ಹೇಳಿದೆ. ಸಭೆ ನಂತರ ಮೋದಿ ಸರ್ಕಾರದ ವರ್ಷಾಚರಣೆ ಕುರಿತಂತೆ ಅಭಿನಂದಿಸಿರುವ ಮುಸ್ಲಿಂ ಸಮುದಾಯಗಳು ಸಭೆಯಲ್ಲಿ ಮೋದಿ ಅವರನ್ನು ಪ್ರಶಂಸಿಸಿ ಅಭಿನಂದನೆ ಸಲ್ಲಿಸಿವೆ.
Advertisement