
ನವದೆಹಲಿ: ಗುಪ್ತಚರ ಇಲಾಖೆ ಮಾಜಿ ನಿರ್ದೇಶಕ ಸೈಯದ್ ಆಸಿಫ್ ಇಬ್ರಾಹಿಂ ಅವರನ್ನು ಕೇಂದ್ರ ಸರ್ಕಾರ ಭಯೋತ್ಪಾದನಾ ನಿಗ್ರಹದಳದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ.
ಜೂ.5 ರಂದು ಕೇಂದ್ರ ಸರ್ಕಾರ ಅಧಿಕೃತವಾಗಿ ನೇಮಕಾತಿ ಆದೇಶ ಪ್ರಕಟಿಸಿದ್ದು, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಪ್ರದೇಶಗಳಲ್ಲಿ ಭದ್ರತಾ ಸವಾಲು ಹಾಗೂ ಐ.ಎಸ್.ಐ.ಎಸ್ ನಿಂದ ಪ್ರಭಾವಕ್ಕೊಳಗಾಗಿರುವ ಯುವಕರ ಆಮೂಲಾಗ್ರ ಸುಧಾರಣೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸೈಯದ್ ಆಸಿಫ್ ಇಬ್ರಾಹಿಂ ನೆರವಾಗಲಿದ್ದಾರೆ.
ಸೈಯದ್ ಆಸಿಫ್ ಇಬ್ರಾಹಿಂ ಅವರ ನೇಮಕಾತಿಯನ್ನು ಸಂಪುಟ ನೇಮಕಾತಿ ಸಮಿತಿ(ಎ.ಸಿ.ಸಿ) ಅಂಗೀಕರಿಸಿದ್ದು, ಗುಪ್ತಚರ ಇಲಾಖೆ ಮಾಜಿ ನಿರ್ದೇಶಕರು ಭಯೋತ್ಪಾದನಾ ನಿಗ್ರಹದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಸರ್ಕಾರಿ ಕಾರ್ಯದರ್ಶಿ ಶ್ರೇಣಿಯ ಜವಾಬ್ದಾರಿಯನ್ನು ಪಡೆದಿರುವ ಸೈಯದ್ ಆಸಿಫ್ ಇಬ್ರಾಹಿಂ ಮುಂದಿನ ಮೂರು ವರ್ಷಗಳವರೆಗೆ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
1977 ರ ಬ್ಯಾಚ್ ನ ಮಧ್ಯಪ್ರದೇಶ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಸೈಯದ್ ಆಸಿಫ್ ಇಬ್ರಾಹಿಂ, ಡಿಸೆಂಬರ್ ನಲ್ಲಿ ಗುಪ್ತಚರ ಇಲಾಖೆ ನಿರ್ದೇಶಕ ಸ್ಥಾನದಿಂದ ನಿವೃತ್ತರಾಗಿದ್ದರು. ಅಲ್ಲದೇ ಪಶ್ಚಿಮ ಏಷ್ಯಾದ ರಾಷ್ಟ್ರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ.
Advertisement