
ಜೈಪುರ: ಸಾವಿರಾರು ವರ್ಷಗಳಿಂದ ಇರುವ ಭಾರತೀಯರ ಸಮಸ್ಯೆಗಳನ್ನು ಪರಿಹರಿಸಲು ಬಂದಿರುವ ನರೇಂದ್ರ ಮೋದಿ ಒಬ್ಬ ಮಹಾಪುರುಷ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಪ್ರಧಾನಿಯನ್ನು ಹಾಡಿಹೊಗಳಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೈಪುರದಲ್ಲಿ ಆಯೋಜಿಸಿದ್ದ ಜಲ ಕ್ರಾಂತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಜಿದ ಅವರು, ಕಳೆದ 29 ವರ್ಷಗಳಿಂದ ಗಂಗಾನದಿಯನ್ನು ಶುದ್ದೀಕರಣಗೊಳಿಸಲು 5 ಸಾವಿರ ಕೋಟಿ ಹಣವನ್ನು ವ್ಯಯಿಸಲಾಗಿದೆ. ಆದರೆ ಅದರಿಂದ ಯಾವುದೇ ಫಲಿತಾಂಶ ಬಂದಿಲ್ಲ ಎಂದು ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಪ್ರಥಮ ಬಾರಿಗೆ ಭಾರತದ ಇತಿಹಾಸದಲ್ಲಿ ಎಲ್ಲವೂ ತಿಳಿದಿರುವ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ದೇಶದ ಎಲ್ಲಾ ಸಮಸ್ಯೆಗಳಿಗೆ, ಎಲ್ಲಾ ಪ್ರಶ್ನೆಗಳಿಗೆ ನರೇಂದ್ರ ಮೋದಿ ಉತ್ತರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಕೇಸರಿ ಅಜೆಂಡಾ ಅಡಿ ಉಮಾ ಭಾರತಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ನಾನು ಭಾರತದ ಬಡತನ ಹೋಗಲಾಡಿಸಿ ಜನರ ಕ್ಷೇಮಾಭಿವೃದ್ಧಿಗಾಗಿ ಆರ್ಥಿಕ ಅಜೆಂಡಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ಗಂಗಾ ನದಿ ತೀರದಲ್ಲಿ ಹಾಗೂ ಅಲ್ಲಿನ ಸಂಪನ್ಮೂಲ ಬಳಸಿಕೊಂಡು ಹಿಂದೂ ಹಾಗೂ ಮುಸ್ಲಿಮರು ಸೇರಿದಂತೆ ಒಟ್ಟು 50 ಕೋಟಿ ಜನ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಕೇಸರಿ ಅಜೆಂಡಾ ಎಲ್ಲಿ ಬರುತ್ತೆ ಎಂದು ಉಮಾ ಭಾರತಿ ಪ್ರಶ್ನಿಸಿದರು. .
Advertisement