
ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿರುವ ಮ್ಯಾಗಿ ನೂಡಲ್ಸ್‌ನಲ್ಲಿ ಮೋನೋಸೋಡಿಯಂ ಗ್ಲುಟಮೇಟ್(ಎಂಎಸ್‌ಜಿ) ಇಲ್ಲ ಎಂದು ನೆಸ್ಲೆ ಕಂಪನಿಯ ಜಾಗತಿಕ ಸಿಇಒ ಪೌಲ್ ಬುಲ್ಕೆ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೌಲ್, ನಮಗೆ ಜಗತ್ತಿನ ಎಲ್ಲಾ ಗ್ರಾಹಕರ ಹಿತಾಸಕ್ತಿಯೇ ಮುಖ್ಯ. ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ನಮ್ಮ ಮೊದಲ ಆದ್ಯತೆಯಾಗಿದ್ದು, ಗ್ರಾಹಕರನ್ನು ಗನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ.
ಭಾರತ ಸೇರಿ ಹಲವು ಕಡೆ ನಾವು ಗುಣಮಟ್ಟ ಕಾಯ್ದುಕೊಂಡಿದ್ದೇವೆ. ನಮ್ಮ ಕಂಪನಿಯ ಮ್ಯಾಗಿ ಬಳಕೆಗೆ ಯೋಗ್ಯವಾಗಿದೆ. ಹೀಗಾಗಿಯೇ ಮ್ಯಾಗಿ 30 ವರ್ಷಗಳಿಂದ ನಂಬಿಕೆಯ ತಿನಿಸಾಗಿದೆ. ಆದರೆ ಇತ್ತೀಚಿನ ಬೆಳವಣಿಗೆಗಳಿಂದ ಗೊಂದಲಗಳು ಸೃಷ್ಟಿಯಾಗಿವೆ. ಇದರಿಂದ ಗ್ರಾಹಕರು ನಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ವಿಶ್ವಾಸ ಗಳಿಸುವವರೆ ಮ್ಯಾಗಿ ಉತ್ಪನ್ನವನ್ನು ಹಿಂಪಡೆಯುವುದಾಗಿ ಪೌಲ್ ತಿಳಿಸಿದ್ದಾರೆ.
ಜಾಗತಿನ ಗುಣಮಟ್ಟವನ್ನು ಭಾರತದಲ್ಲೂ ಕಾಯ್ದುಕೊಂಡಿದ್ದೇವೆ. ಗುಣಮಟ್ಟದ ವಿಚಾರದಲ್ಲಿ ನೆಸ್ಲೆ ಕಂಪನಿ ರಾಜಿಯಾಗುವುದಿಲ್ಲ ಮತ್ತು ಗ್ರಾಹಕರ ನಂಬಿಕೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಮ್ಯಾಗಿಯಲ್ಲಿ ನಾವು ಎಂಎಸ್‌ಜಿ ಸೇರಿಸುವುದಿಲ್ಲ. ಆದರೂ ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ನಮಗೂ ಗ್ರಾಹಕರ ಗೊಂದಲಗಳ ಬಗ್ಗೆ ಅರಿವಿದೆ. ಹೀಗಾಗಿ ಇನ್ನು ಮುಂದೆ ಮೋನೋಸೋಡಿಯ ಇಲ್ಲವೆಂದು ಪ್ಯಾಕೆಟ್ ಮೇಲೆ ಲೆಬಲ್ ಅಂಟಿಸುವುದಾಗಿ ಪೌಲ್ ತಿಳಿಸಿದ್ದಾರೆ.
Advertisement