ಹಣಕ್ಕಾಗಿ ಮತ: ಮುಂದುವರಿದ ಆಂಧ್ರ, ತೆಲಂಗಾಣ ಯುದ್ಧ

ಟಿಡಿಪಿ ಶಾಸಕ ರೇವಂತ್ ರೆಡ್ಡಿ ಹಣಕ್ಕಾಗಿ ಮತ ಪ್ರಕರಣ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಾವೇರಿದ್ದು, ತೆಲಂಗಾಣ, ಆಂಧ್ರಪ್ರದೇಶದ ಮತ್ತೆ ದಾಳಿ, ಪ್ರತಿದಾಳಿಗಳ ಯುದ್ಧ ಆರಂಭವಾಗಿದೆ...
ಹಣಕ್ಕಾಗಿ ಮತ: ಮುಂದುವರಿದ ಆಂಧ್ರ, ತೆಲಂಗಾಣ ಯುದ್ಧ (ಸಾಂದರ್ಭಿಕ ಚಿತ್ರ)
ಹಣಕ್ಕಾಗಿ ಮತ: ಮುಂದುವರಿದ ಆಂಧ್ರ, ತೆಲಂಗಾಣ ಯುದ್ಧ (ಸಾಂದರ್ಭಿಕ ಚಿತ್ರ)

ಹೈದರಾಬಾದ್: ಟಿಡಿಪಿ ಶಾಸಕ ರೇವಂತ್ ರೆಡ್ಡಿ ಹಣಕ್ಕಾಗಿ ಮತ ಪ್ರಕರಣ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಾವೇರಿದ್ದು, ತೆಲಂಗಾಣ, ಆಂಧ್ರಪ್ರದೇಶದ ಮತ್ತೆ ದಾಳಿ, ಪ್ರತಿದಾಳಿಗಳ ಯುದ್ಧ ಆರಂಭವಾಗಿದೆ.

ಟಿಆರ್ ಎಸ್ ಪಕ್ಷ ತನ್ನ ಪಕ್ಷದ ವಿರುದ್ಧ ಷಡ್ಯಂತ್ರ ರೂಪಿಸಿದೆ ಎಂದು ಹೇಳುತ್ತಿರುವ ಟಿಡಿಪಿ ಪಕ್ಷ ಇದೀಗ ಟಿಆರ್ ಎಸ್ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಕೇಂದ್ರಕ್ಕೆ ದೂರು ನೀಡಲು ತೀರ್ಮಾನಿಸಿದೆ.

ಈ ಕುರಿತಂತೆ ಮಾತನಾಡಿರುವ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ನಿಮ್ಮಕಾಯಲ ಚಿನ್ನ ರಾಜಪ್ಪ ಅವರು, ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ಬಳಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ವಿಧಾನಸಭಾ ಶಾಸಕ ಸ್ಟೀಫನ್ ಸನ್, ಇನ್ನಿತರೆ ಆಂಧ್ರದ ಸಚಿವರು ದೂರವಾಣಿಯಲ್ಲಿ ಮಾತನಾಡಿರುವ ದಾಖಲೆಗಳಿವೆ ಎಂದು ಹೇಳಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರ ದೂರವಾಣಿಗಳನ್ನು ಕದ್ದಾಲಿಕೆ ಮಾಡುವುದು ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿದಂತೆ. ಟಿಆರ್ ಎಸ್ ಪಕ್ಷ ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಟಿಆರ್ ಎಸ್ ದೂರವಾಣಿ ಕದ್ದಾಲಿಕೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿದ್ದು, ಕೂಡಲೇ ಈ ಕುರಿತಂತೆ ಕೇಂದ್ರಕ್ಕೆ ದೂರು ನೀಡಲಾಗುವುದು ಎಂದು ಶುಕ್ರವಾರ ಹೇಳಿದ್ದಾರೆ.

ಟೆಲಿಫೋನ್ ಕದ್ದಾಲಿಕೆ ದಾಖಲೆಗಳಲ್ಲಿ ಚಂದ್ರಬಾಬು ನಾಯ್ಡು ಮಾತನಾಡಿರುವ ದಾಖಲೆಗಳಿವೆ ಎಂದು ಹೇಳುತ್ತಿರುವ ತೆಲಂಗಾಣ ಗೃಹಸಚಿವರು ಈ ದಾಖಲೆಯನ್ನೇಕೆ ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತಿಲ್ಲ. ಟಿಆರ್ ಎಸ್ ಗೆ ಧೈರ್ಯವಿದ್ದರೆ ಚಂದ್ರಬಾಬು ನಾಯ್ಡು ಮಾತನಾಡಿರುವ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ನಾಯ್ಡು ವಿರುದ್ಧ ಪ್ರಕರಣ ದಾಖಲು ಮಾಡಲಿ ಎಂದು ಇದೇ ವೇಳೆ ತೆಲಂಗಾಣ ಗೃಹ ಸಚಿವರಿಗೆ ಚಿನ್ನ ರಾಜಪ್ಪ ಬೆದರಿಕೆ ಹಾಕಿದ್ದಾರೆ.

ಏನಿದು ಪ್ರಕರಣ:  ತೆಲಂಗಾಣ ವಿಧಾನಸಭೆಯಿಂದ ವಿಧಾನ ಪರಿಷತ್‌ ನಡೆಯುವ ಚುನಾವಣೆಯಲ್ಲಿ ಬಿಜೆಪಿ–ಟಿಡಿಪಿ ಅಭ್ಯರ್ಥಿಗೆ ಮತ ನೀಡುವಂತೆ ಟಿಆರ್‌ಎಸ್‌ ನಾಮನಿರ್ದೇಶಿತ ಶಾಸಕ ಸ್ಟೀಫನ್‌ಸನ್‌ ಅವರಿಗೆ ಟಿಡಿಪಿ ಹಣದ ಆಮಿಷ ಒಡ್ಡಿತ್ತು ಎಂದು ಹೇಳಲಾಗುತ್ತಿತ್ತು.

ಮೇ 31 ರಂದು ತೆಲಂಗಾಣ ವಿಧಾನ ಸಭಾ ಶಾಸಕ ಸ್ಟೀಫನ್‌ಸನ್‌ ನಿವಾಸದಲ್ಲಿ ರು.50 ಲಕ್ಷ ನೀಡುವಾಗ ತೆಲಂಗಾಣ ಟಿಡಿಪಿ ಶಾಸಕ ರೇವಂತ್‌ ರೆಡ್ಡಿ ಹಾಗೂ ಅವರ ಇಬ್ಬರು ಸಹಚರರು ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಬಲೆಗೆ ಬಿದ್ದಿದ್ದರು. ಈ ಹಿಂದೆಯೇ ಆಂಗ್ಲೋ –ಇಂಡಿಯನ್‌  ನಾಮ ನಿರ್ದೇಶಿತ ಶಾಸಕರಾಗಿರುವ ಸ್ಟೀಫನ್‌ಸನ್‌ ಅವರು ಟಿಡಿಪಿ ಪಕ್ಷ ತಮಗೆ ಆಮಿಷ ಒಡ್ಡುತ್ತಿರುವ ಕುರಿತಂತೆ ಎಸಿಬಿಗೆ ದೂರು ನೀಡಿದ್ದರು. ಇದರಂತೆ ಮೇ.31 ರಂದು ರೇವಂತ್ ರೆಡ್ಡಿ ಅವರು ಸ್ಟೀಫನ್ ಸನ್ ಅವರಿಗೆ ಹಣ ನೀಡಲು ಬಂದಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದರು.

ಈ ಹಿಂದೆ ರೇವಂತ್ ರೆಡ್ಡಿ ಸ್ಟೀಫನ್ ಸನ್ ಜೊತೆ ಹಲವು ಬಾರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಮಾತುಕತೆ ವೇಳೆ ಹಲವು ಬಾರಿ ರೇವಂತ್ ರೆಡ್ಡಿ ಅವರು ಬಾಸ್ ಎಂಬ ಹೆಸರು ಉಪಯೋಗಿಸಿರುವುದು ಸ್ಥಳದಲ್ಲಿ ನಿಯೋಜಿಸಿದ್ದ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ರೇವಂತ್ ರೆಡ್ಡಿ ಕರೆಯುತ್ತಿದ್ದ ಆ ಬಾಸ್ ಹೆಸರಿನ ವ್ಯಕ್ತಿ ಯಾರೆಂಬುದು ಈ ವರೆಗೂ ತಿಳಿದುಬಂದಿಲ್ಲ. ಪ್ರಸ್ತುತ ಎಸಿಬಿ ನ್ಯಾಯಾಲಯವು ತನಿಖೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿಗಳು ತನಿಖೆ ನಂತರವಷ್ಟೇ ಹೊರಬೀಳಲಿದೆ.

ಇದರಂತೆ ಬಾಸ್ ವ್ಯಕ್ತಿ ಯಾರೆಂಬ ಕುರಿತಂತೆ ಪ್ರತಿಪಕ್ಷಗಳ ನಡುವೆ ಮಾತಿನ ವಾಗ್ಧಾಳಿಗಳು ಮುಂದುವರೆದಿದ್ದು, 'ಬಾಸ್' ವ್ಯಕ್ತಿ ಬೇರಾರು ಅಲ್ಲ ಅದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ.ಶಾಸಕ ರೇವಂತ್ ರೆಡ್ಡಿ ಕೇವಲ ಸಣ್ಣ ಬೇಟೆಯಷ್ಟೇ. ಪ್ರಕರಣದ ಪ್ರಮುಖ ಸೂತ್ರಧಾರ ನಾಯ್ಡು ಅವರು. ಈ ಕುರಿತಂತೆ ದೂರವಾಣಿಯಲ್ಲಿ ಮಾತನಾಡಿರುವ ದಾಖಲೆಗಳು ಎಸಿಬಿ ನ್ಯಾಯಾಲಯದ ಬಳಿ ಇದೆ ಎಂದು ತೆಲಂಗಾಣ ಗೃಹ ಸಚಿವ ನರಸಿಂಹ ರಾವ್ ಅವರು ಶುಕ್ರವಾರ ಗಂಭೀರ ಆರೋಪವನ್ನು ಮಾಡಿದ್ದರು.

ತೆಲಂಗಾಣ ಗೃಹ ಸಚಿವರ ಈ ಹೇಳಿಕೆಗೆ ತೀವ್ರ ಕೆಂಡಾಮಂಡಲವಾಗಿರುವ ಆಂಧ್ರಸರ್ಕಾರವು, ತೆಲಂಗಾಣ ಸರ್ಕಾರ ಇತರೆ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯದ ಹಲವು ಸಚಿವರ ಗುಪ್ತ ಮಾಹಿತಿಗಳನ್ನು ದೂರವಾಣಿ ಮೂಲಕ ಕದ್ದಾಲಿಕೆ ಮಾಡಿದ್ದು, ಇದು ಅಕ್ಷ್ಯಮ್ಯ ಅಪರಾಧವಾಗಿದೆ. ಈ ಕುರಿತಂತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com