ನಮ್ಮವರಿಗೆ ಬೇಡವಾದ ಭಾರತೀಯ ಶಿಕ್ಷಣ: ಸ್ಮೃತಿ ಇರಾನಿ

ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರು ಕೊಂಡಾಡುತ್ತಾರೆ ಮತ್ತು ಅವರ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆದರೆ ನಮ್ಮ ದೇಶದಲ್ಲಿ ಕೇಸರೀಕರಣ ಎಂದು ಕರೆಯುತ್ತಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಖೇದ ವ್ಯಕ್ತಪಡಿಸಿದರು...
ಸ್ಮೃತಿ ಇರಾನಿ
ಸ್ಮೃತಿ ಇರಾನಿ

ನವದೆಹಲಿ: ಕೇಂದ್ರ ಸರ್ಕಾರ ಶಿಕ್ಷಣವನ್ನು ಕೇಸರೀಕರಣಗೊಳಿಸುತ್ತಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿರುವ ಮಾನವ ಸಂಪನ್ಮೂಲ ಸಚಿವೆ ಸೃತಿ ಇರಾನಿ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆ, ಪುರಾತನ ತತ್ವಗಳು ಮತ್ತು ಮೌಲ್ಯಗಳನ್ನು ವಿದೇಶಿಯರು ಕೊಂಡಾಡುತ್ತಾರೆ ಮತ್ತು ಅವರ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆದರೆ ನಮ್ಮ ದೇಶದಲ್ಲಿ ಕೇಸರೀಕರಣ ಎಂದು ಕರೆಯುತ್ತಾರೆ ಎಂದು ಖೇದ ವ್ಯಕ್ತಪಡಿಸಿದರು.

ಭಾರತದ ಪುರಾತನ ಗಣಿತ ಪದ್ಧತಿಯನ್ನು ವಿಶ್ವವೇ ಕೊಂಡಾಡಿದೆ. ಅದನ್ನು ಇನ್ನಷ್ಟು ಮಟ್ಟಿಗೆ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಹೊರಟರೆ ಕೇಸರೀಕರಣವಾಗುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಹಿಂದು ಶಿಕ್ಷಣ ಮಂಡಳಿಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಿನ್ಸೆಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮಂಜುಳಾ ಭಾರ್ಗವ್ ಅವರು ಗಣಿತವನ್ನು ಸಂಸ್ಕೃತ ಶ್ಲೋಕದ ಮೂಲಕ ಕಲಯುವ ಪದ್ಧತಿಯನ್ನು ತೋರಿಸಿಕೊಟ್ಟಾಗ  ಅವರಿಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ವಿದೇಶಿಯರು ನಮ್ಮ ಶಿಕ್ಷಣ ಪದ್ಧತಿಯನ್ನು ಕೊಂಡಾಡುವಾಗ ನಮ್ಮವರೇ ದೂಷಿಸುವ ವಾತಾವರಣ ಕಾಣಲು ಭಾರತದಲ್ಲಿ ಮಾತ್ರ ಸಾಧ್ಯ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಬೆನ್ನು ತೋರಿಸಿ ಹೋಗುವವರು ಬೇರೆ ಯಾವ ದೇಶದಲ್ಲಿಯೂ ಇರಲಾರರು ಎಂದರು.

ಯೋಗ ದಿನ ಆಚರಣೆ ಕುರಿತು ಕೇಳಿಬರುತ್ತಿರುವ ಟೀಕೆಗೆ ಉತ್ತರಿಸಿದ ಅವರು, ವಿಶ್ವಸಂಸ್ಥೆಯಲ್ಲಿ ಯೋಗ ದಿನವವನ್ನು ಆಚರಿಸಲು ಬೆಂಬಲ ನೀಡಿದ ಎಲ್ಲಾ 175 ರಾಷ್ಟ್ರಗಳ ಜನರು ಸಹ ಕೇಸರಿ ಗುಣದವರೇ ಎಂದು ಪ್ರಶ್ನಿಸಿದರು.

ಶಿಕ್ಷಣ ಕೇವಲ ಯೋಜನೆ ರಚನೆಗೆ,ಶಾಲೆ,ಕಾಲೇಜಿಗೆ ಸೀಮಿತವಾಗಿಲ್ಲ,ಅದು ಇಡೀ ಸಮಾಜ, ಮಾನವ ಜನಾಂಗವನ್ನು ಒಳಗೊಂಡಿದೆ. ಈ ವರ್ಷದ ಅಂತ್ಯಕ್ಕೆ ತಯಾರಾಗುವ ಹೊಸ ಶಿಕ್ಷಣ ನೀತಿ ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಸಹಕಾರಿಯಾಗಲಿದೆ ಎಂದು ಸಚಿವೆ ಸ್ಮೃತಿ ಇರಾನಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com