ಜಾಹೀರಾತಿಗೆ ರು. 445 ಕೋಟಿ, ಗುಣಮಟ್ಟ ಪರೀಕ್ಷೆಗೆ ರು.19 ಕೋಟಿ!

ಮ್ಯಾಗಿ ನೂಡಲ್ಸ್ ನ ಜಾಹೀರಾತು ಮತ್ತು ಮಾರಾಟ ಉತ್ತೇಜನಕ್ಕೆ ಬರೋಬ್ಬರಿ ರು.445 ಕೋಟಿ, ಗುಣಮಟ್ಟ ಪರೀಕ್ಷೆಗೆ ಜುಜುಬಿ ರು.12-20 ಕೋಟಿ!...
ಮ್ಯಾಗಿ ನೂಡಲ್ಸ್
ಮ್ಯಾಗಿ ನೂಡಲ್ಸ್

ನವದೆಹಲಿ: ಮ್ಯಾಗಿ ನೂಡಲ್ಸ್ ನ ಜಾಹೀರಾತು ಮತ್ತು ಮಾರಾಟ ಉತ್ತೇಜನಕ್ಕೆ ಬರೋಬ್ಬರಿ  ರು.445 ಕೋಟಿ, ಗುಣಮಟ್ಟ ಪರೀಕ್ಷೆಗೆ ಜುಜುಬಿ ರು.12-20 ಕೋಟಿ!
ಆಹಾರ ಸುರಕ್ಷೆ ಗುಣಮಟ್ಟದಲ್ಲಿ ದೋಷದ ಆರೋಪ ಹೊತ್ತು, ವಿವಾದದ ಕೇಂದ್ರ ಬಿಂದುವಾಗಿರುವ ನೆಸ್ಲೆ ಕಂಪನಿಯು ಕಳೆದ ವರ್ಷ ಮಾಡಿದ ವೆಚ್ಚವಿದು. ಕೇವಲ ಜಾಹೀರಾತಿಗಾಗಿ ಒಂದೇ ವರ್ಷದಲ್ಲಿ ರು. 445 ಕೋಟಿ ವ್ಯಯಿಸಿರುವ ಕಂಪನಿಯು ಗುಣಮಟ್ಟ ಪರೀಕ್ಷೆಗೆ ಅದರ ಶೇ.5ರಷ್ಟು ವೆಚ್ಚ ಮಾಡಿಲ್ಲ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಸ್ವತಃ ನೆಸ್ಲೆಯ ವಾರ್ಷಿಕ ಬ್ಯಾಲೆನ್ಸ್ ಶೀಟ್ ಈ ವಿಚಾರವನ್ನು ಬಹಿರಂಗಪಡಿಸಿದೆ. ಇದೇ ವೇಳೆ, ನೆಸ್ಲೆ ಕಂಪನಿಯು ತನ್ನ ನೌಕರರಿಗಾಗಿ ಮಾಡಿದ ವೆಚ್ಚವು ಕಳೆದ 5 ವರ್ಷಗಳಲ್ಲಿ ಭಾರಿ ಏರಿಕೆ ಕಂಡಿದೆ. 2010ರಲ್ಲಿ ರು. 433 ಕೋಟಿಯಿದ್ದ ವೆಚ್ಚವು 2014ರ ವೇಳೆಗೆ ಶೇ.75ರಷ್ಟು ಅಂದರೆ ರು.755 ಕೋಟಿಯಾಗಿದೆ. ಇದೇ ರೀತಿ, ಜಾಹೀರಾತಿಗಾಗಿ ಮಾಡಿದ ವೆಚ್ಚ 2010ರಲ್ಲಿ ರು.302 ಕೋಟಿಯಿದ್ದಿದ್ದು, 2014ರ ವೇಳೆಗೆ ರು.445 ಕೋಟಿಗೇರಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ನೆಸ್ಲೆಯನ್ನು ಗ್ರಾಹಕರ ನ್ಯಾಯಾಲಯಕ್ಕೆಳೆದ ಕೇಂದ್ರ: ಮ್ಯಾಗಿಯಲ್ಲಿ ಹೆಚ್ಚುವರಿ ಸೀಸ ಮತ್ತು ಎಂಎಸ್‍ಜಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಮ್ಯಾಗಿಗೆ ನಿಷೇಧ ಹೇರಲಾಗುತ್ತಿದೆ. ಇದರ ನಡುವೆಯೇ ಕೇಂದ್ರ ಸರ್ಕಾರವು ನೆಸ್ಲೆಯನ್ನು ಗ್ರಾಹಕ ನ್ಯಾಯಾಲಯಕ್ಕೆಳೆದಿದೆ.  ನೆಸ್ಲೆಯು ನ್ಯಾಯಸಮ್ಮತವಲ್ಲದ ವ್ಯಾಪಾರ ನಡೆಸಿದೆ ಹಾಗೂ ಜನರ ಹಾದಿತಪ್ಪಿಸುವ ಜಾಹೀರಾತುಗಳನ್ನು ನೀಡಿದೆ ಎಂದು ಆರೋಪಿಸಿರುವ ಸರ್ಕಾರ, ಗ್ರಾಹಕ ನ್ಯಾಯಾಲಯಕ್ಕೆ ಈ ಬಗ್ಗೆ ದೂರು ನೀಡಿದೆ. ಅಷ್ಟೇ ಅಲ್ಲದೆ, ಕಂಪನಿಯು ತಮಗಾದ ಆರ್ಥಿಕ ನಷ್ಟವನ್ನು ಭರಿಸಿಕೊಡಬೇಕು ಎಂದು ಆಗ್ರಹಿಸಿದೆ. ``ಇದು ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರ. ತಪ್ಪು ಮಾಡಿದ ಸಂಸ್ಥೆಯ ವಿರುದಟಛಿ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದೆ'' ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಸರ್ಕಾರವು ಬಹುರಾಷ್ಟ್ರೀಯ ಕಂಪನಿಯೊಂದರಿಂದ ಹಾನಿ ತುಂಬಿಕೊಡುವಂತೆ ಕೇಳುತ್ತಿರುವುದು ಇದೇ ಮೊದಲು ಎಂದೂ ಹೇಳಿದ್ದಾರೆ. ಇದೇ ವೇಳೆ, ಮ್ಯಾಗಿ ನಿಷೇಧಿಸಿರುವ ರಾಜ್ಯಗಳ ಸಾಲಿಗೆ ಭಾನುವಾರ ಗೋವಾ ಕೂಡ ಸೇರ್ಪಡೆಯಾಗಿದೆ.

ಮಾಹಿತಿಯಿದ್ದರೂ ನಿರ್ಲಕ್ಷ್ಯ: ನೂಡಲ್ಸ್ ಸೇರಿದಂತೆ ಸಂಸ್ಕರಿತ ಆಹಾರದಲ್ಲಿ ಸೀಸದ ಅಂಶವು ಹೆಚ್ಚಾಗಿ ಹಾಕಲಾಗುತ್ತದೆ ಎಂಬ ಬಗ್ಗೆ ಪದೇ ಪದೆ ಅಲರ್ಟ್ ಮಾಡಿದ್ದರೂ ಭಾರತದ ಸರ್ಕಾರಗಳು ಅದನ್ನು ನಿರ್ಲಕ್ಷ್ಯ ವಹಿಸಿದವು. ಮಾತ್ರವಲ್ಲ, ಅದನ್ನು ತಡೆಯಲು ಯಾವುದೇ ಕಾನೂನನ್ನೂ ಜಾರಿ ಮಾಡಲಿಲ್ಲ ಎಂದು ವಿಶ್ಲೇಷಕರು ಆರೋಪಿಸಿದ್ದಾರೆ. ಜತೆಗೆ, ಪೈಂಟ್‍ನಲ್ಲಿ ಸೀಸದ ಅಂಶ ಸೇರ್ಪಡೆಗೆ ಮಿತಿ ಕಡ್ಡಾಯಮಾಡುವಂತೆ ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅದು ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯೆಂದು ಎಚ್ಚರಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಟಾಕ್ಸಿಕ್ಸ್ ಲಿಂಗ್ ಸಹನಿರ್ದೇಶಕ ಸತೀಶ್ ಸಿನ್ಹಾ ತಿಳಿಸಿದ್ದಾರೆ. ಇದೇ ವೇಳೆ, ಮ್ಯಾಗಿಯಲ್ಲಿ ಸೀಸದ ಅಂಶವು ನೂಡಲ್ಸ್ ಗೆ ಬಳಸುವ ಕಚ್ಚಾ ವಸ್ತುಗಳಿಂದ ಬಂದಿರುವ ಸಾಧ್ಯತೆಯೂ ಇದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com