
ಮುಂಬೈ: ಮಹಾರಾಷ್ಟ್ರ ಗಣ್ಯ ವ್ಯಕ್ತಿಗಳ ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಎ.ಐ.ಎಂ.ಐ.ಎಂ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಎ.ಐ.ಎಂ.ಐ.ಎಂ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಮಹಾರಾಷ್ಟ್ರ ಮುಖಂಡರ ಸ್ಮಾರಕಗಳಿಗೆ ಭೂಮಿ ನೀಡುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿರುವ ಎ.ಐ.ಎಂ.ಐ.ಎಂ ರಾಜ್ಯ ದ್ರೋಹವೆಸಗುತ್ತಿದೆ ಎಂದು ಆರೋಪಿಸಿದೆ.
ಛತ್ರಪತಿ ಶಿವಾಜಿ, ಶಿವಸೇನೆಯ ಮುಖಂಡ ದಿ. ಬಾಳಾ ಸಾಹೇಬ್ ಠಾಕ್ರೆ ಹಾಗೂ ಬಿಜೆಪಿ ಮುಖಂಡ ದಿ.ಗೋಪಿನಾಥ್ ಮುಂಡೆ ಅವರ ಸ್ಮಾರಕ ನಿರ್ಮಾಣಕ್ಕಾಗಿ ಭೂಮಿ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡುವುದು ಸಾರ್ವಜನಿಕರ ಹಣವನ್ನು ಪೋಲು ಮಾಡಿದಂತೆ ಎಂದು ಟೀಕಿಸಿದ್ದ ಎ.ಐ.ಎಂ.ಐ.ಎಂ ಈ ನಿರ್ಧಾರವನ್ನು ವಿರೋಧಿಸಿತ್ತು. ಅಲ್ಲದೇ ಸ್ಮಾರಕ ನಿರ್ಮಾಣ ಮಾಡುವ ಬದಲು, ಆಸ್ಪತ್ರೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಕಟ್ಟಗಳ ನಿರ್ಮಾಣಕ್ಕೆ ಭೂಮಿ ನೀಡಬೇಕೆಂದು ಎ.ಐ.ಎಂ.ಐ.ಎಂ ಸಲಹೆ ನೀಡಿತ್ತು.
ಎ.ಐ.ಎಂ.ಐ.ಎಂ ಆಕ್ಷೇಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ, ಹಜ್ ಯಾತ್ರೆಗೆ ಸಬ್ಸಿಡಿ ನೀಡುವುದು ಸಾರ್ವಜನಿಕರ ಹಣವನ್ನು ಪೋಲುಮಾಡಿದಂತಾಗುವುದಿಲ್ಲವೇ? ಎಂದು ಪ್ರಶ್ನಿಸಿದೆ. ಹಜ್ ಯಾತ್ರೆಗೆ ನೀಡುವ ಸಬ್ಸಿಡಿ ಹಣದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಬಹುದು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
Advertisement