ಹಜ್ ಯಾತ್ರಿಕರಿಗೆ ಈ ವರ್ಷ ಉತ್ತಮ ಸೌಲಭ್ಯ ಕಲ್ಪಿಸುತ್ತೇವೆ: ಕೇಂದ್ರ ಸರ್ಕಾರ
ನವದೆಹಲಿ: ಹಜ್ ಯಾತ್ರಿಕರಿಗೆ ಈ ವರ್ಷ ಉತ್ತಮ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.
ಕಳೆದ ವರ್ಷ ಏರ್ ಇಂಡಿಯಾದಿಂದ ಉಂಟಾದ ವಿಳಂಬದಿಂದಾಗಿ ಹಜ್ ಯಾತ್ರಿಕರಿಗೆ ತೊಂದರೆ ಉಂತಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಈ ವರ್ಷ ಹಜ್ ಯಾತ್ರಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದೆ. ಹಜ್ ಯಾತ್ರಿಕರಿಗೆ ನೀಡಲಾಗುವ ಸೌಲಭ್ಯದ ಬಗ್ಗೆ ಖುದ್ದು ಪರಿಶೀಲನೆ ನಡೆಸುವುದಾಗಿ ತಿಳಿಸಿರುವ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್ ತಿಳಿಸಿದ್ದಾರೆ.
ಅಖಿಲ ಭಾರತ ಹಜ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ವಿ.ಕೆ ಸಿಂಗ್, ಹಜ್ ಯಾತ್ರೆಗೆ ತೆರಳಲಿರುವವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಂತೆ ಏರ್ ಇಂಡಿಯಾ ಸೇರಿದಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಯಾತ್ರಾರ್ಥಿಗಳಿಗೆ ಅನುಕೂಲವಾಗಲು ಈ ಬಾರಿ ಸೌದಿ ಅರೇಬಿಯಾದಲ್ಲಿ 4 ರೀತಿಯ ಆಹಾರ ತಯಾರಿಸಲಾಗುತ್ತದೆ. ಹಜ್ ಯಾತ್ರೆಯಿಂದ ವಾಪಸ್ಸಾದ ನಂತರ ಯಾತ್ರಾರ್ಥಿಗಳು ಕಳೆದ ವರ್ಷಕ್ಕಿಂತಲೂ ಈ ಬಾರಿಯ ಸೌಲಭ್ಯ ಉತ್ತಮವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ ಎಂದು ವಿ.ಕೆ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಜ್ ಯಾತ್ರೆಗಾಗಿ ಈಗಗಾಲೇ 3 .83 ಲಕ್ಷ ಯಾರಾರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಭಾರತದ ಕೋಟಾದಡಿ ಹೆಚ್ಚು ಜನರು ಹಜ್ ಯಾತ್ರೆಗೆ ತೆರಳುವುದಕ್ಕೆ ಅನುಮತಿ ನೀದುವುದರ ಬಗ್ಗೆ ಸೌದಿ ಸರ್ಕಾರದೊಂದಿಗೆ ವಿ.ಕೆ ಸಿಂಗ್ ಮಾತುಕತೆ ನಡೆಸಿದ್ದು, ಸೌದಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂಧಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ