
ಸಾಮಾಜಿಕ ಜಾಲತಾಣ ಟ್ವಿಟರ್ ನ ಸಿಇಒ ಡಿಕ್ ಕಸ್ಟಾಲೊ ಜುಲೈ ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಡಿಕ್ ಕಸ್ಟಾಲೊ ರಾಜೀನಾಮೆ ಬಳಿಕ, ಜುಲೈ 1 ರಿಂದ ಟ್ವಿಟರ್ ನ ಸಹ ಸಂಸ್ಥಾಪಕ ಜ್ಯಾಕ್ ಡಾರ್ಸೆ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಡಿಕ್, ಟ್ವಿಟರ್ ನ ನಿರ್ದೇಶಕರ ಮಂಡಳಿಯಲ್ಲಿ ಮುಂದುವರೆಯಲಿದ್ದಾರೆ.
ಟ್ವಿಟರ್ ನ ಷೇರುದಾರರೊಂದಿಗೆ ನಡೆದ ಸಭೆಯಲ್ಲಿ ರಾಜಿನಾಮೆ ನಿರ್ಧಾರವನ್ನು ಪ್ರಕಟಿಸಿರುವ ಡಿಕ್ ಕಾಸ್ಟಾಲೋ, ಬದಲಾವಣೆಗೆ ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಡಿಕ್ ಕಸ್ಟಾಲೊ ಕಳೆದ 5 ವರ್ಷಗಳಿಂದ ಟ್ವಿಟರ್ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಟ್ವಿಟರ್ ನ್ನು ಅಂತರ್ಜಾಲದ ಜನಪ್ರಿಯ ವೆಬ್ ಸೈಟ್ ನ್ನಾಗಿ ರೂಪಿಸುವಲ್ಲಿ ಡಿಕ್ ಮಹತ್ವದ ಪಾತ್ರ ವಹಿಸಿದ್ದಾರೆ. ಆದಾಗ್ಯೂ ಫೇಸ್ ಬುಕ್ ಗಿಂತಲೂ ಟ್ವಿಟರ್ ಹಿಂದಿದ್ದು ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯೂ ಕುಂಟಿತವಾಗಿದೆ ಎಂದು ಹೇಳಲಾಗಿದೆ.
2014 ರಲ್ಲಿ ಟ್ವಿಟರ್ ಗೆ 1 .4 ಬಿಲಿಯನ್ ಆದಾಯ ಬಂದಿದ್ದರೆ 578 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ. ಅಲ್ಲದೇ ಟ್ವಿಟರ್ ನ ಷೇರುಗಳು ಶೇ.25 ರಷ್ಟು ಕುಸಿದಿದ್ದವು. ಈಗ ಟ್ವಿಟರ್ ಸಿಇಒ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಟ್ವಿಟರ್ ಷೇರುಗಳು ಏರಿಕೆಯಾಗಿವೆ.
Advertisement