
ನವದೆಹಲಿ: ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿದ ಆರೋಪದಡಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಬಂಧನಕ್ಕೊಳಗಾಗಿರುವುದು ಆಪ್ ಪಕ್ಷದಲ್ಲಿ ಅಸಮಾಧಾನ ಮೂಡಿಸಿದೆ.
ಪ್ರಕರಣದಿಂದ ತೀವ್ರ ಆಕ್ರೋಶಗೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಿತೇಂದ್ರ ತೋಮರ್ ನನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಾಜಿ ಕಾನೂನು ಸಚಿವ ಜೈಲಿಗೆ ಹೋಗಿರುವುದರಿಂದ ಆಪ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ಜಿತೇಂದ್ರ ತೋಮರ್ ನನ್ನು ಉಚ್ಛಾಟಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ಅಲ್ಲದೇ ಕಾನೂನು ಸಮರ ನಡೆಸುತ್ತಿರುವ ಆಪ್ ಶಾಸಕನಿಗೆ ಪಕ್ಷದಿಂದ ಯಾವುದೇ ನೆರವು ನೀಡದೇ ಇರಲು ತೀರ್ಮಾನಿಸಲಾಗಿದೆಯಂತೆ.
ಇದೇ ವೇಳೆ ನಕಲಿ ಪದವಿ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಅಧಿಕಾರಿಗಳು ತೋಮರ್ ನನ್ನು ಬಿಹಾರದ ಭಗಲ್ ಪುರಕ್ಕೆ ಕರೆದೊಯ್ಯಲಿದ್ದಾರೆ. ಜಿತೇಂದ್ರ ತೋಮರ್ ಬಂಧನಕ್ಕೊಳಗಾದ ಪ್ರಾರಂಭದಲ್ಲಿ ದೆಹಲಿ ಸರ್ಕಾರ ತೋಮರ್ ಬೆಂಬಲಕ್ಕೆ ನಿಂತಿತ್ತು, ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ತೋಮರ್ ಅವರನ್ನು ಏಕಾಏಕಿ ಬಂಧಿಸಲು ಅವರೇನು ಭಯೋತ್ಪಾದಕರಾ? ಎಂದು ಪ್ರಶ್ನಿಸಿದ್ದರು. ಆದರೆ ನಕಲಿ ಪದವಿ ಪ್ರಮಾಣ ಪತ್ರ ನೀಡಿರುವ ತೋಮರ್ ಜಾಮೀನು ಅರ್ಜಿ ವಜಾಗೊಂಡ ಬಳಿಕ ಆಮ್ ಆದ್ಮಿ ಪಕ್ಷದ ವರಸೆ ಬದಲಾಗಿದ್ದು, ಪಕ್ಷದಿಂದ ಉಚ್ಚಾಟಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
Advertisement