
ನವದೆಹಲಿ: ಮುಂಬರುವ ದಿನಗಳಲ್ಲಿ ಬಡ್ಡಿದರದಲ್ಲಿ ಹೆಚ್ಚಿನ ಕಡಿತ ಮಾಡುವುದಾಗಿ ಸಾರ್ವಜನಿಕ ವಲಯ ಬ್ಯಾಂಕುಗಳು ಭರವಸೆ ನೀಡಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶುಕ್ರವಾರ ತಿಳಿಸಿದ್ದಾರೆ.
ಸಾರ್ವಜನಿಕ ವಲಯ ಬ್ಯಾಂಕುಗಳ ಹಣಕಾಸು ಸಾಧನೆ ಮತ್ತು ಆರ್ ಬಿಐ ಈ ವರ್ಷ ಇಲ್ಲಿಯವರೆಗೆ ಮಾಡಿರುವ ಬಡ್ಡಿ ದರ ಕಡಿತ ಮೊದಲಾದ ಕುರಿತು ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.ಕೆಲವು ಬ್ಯಾಂಕುಗಳು ಈಗಾಗಲೇ ಬಡ್ಡಿದರವನ್ನು ಕಡಿತ ಮಾಡಿವೆ. ಇನ್ನು ಕೆಲವು ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಮಾಡಲಿವೆ ಎಂದು ಹೇಳಿದರು.
ಬ್ಯಾಲೆನ್ಸ್ ಶೀಟ್ ಸಮಸ್ಯೆ ಹಾಗೂ ಸಣ್ಣ ಉಳಿತಾಯ ಯೋಜನೆಯಲ್ಲಿ ಅಧಿಕ ಬಡ್ಡಿದರಗಳಿಂದಾಗಿ ಬಡ್ಡಿದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಕೆಲವು ಬ್ಯಾಂಕುಗಳು ಅಸಹಾಯಕತೆ ವ್ಯಕ್ತಪಡಿಸಿವೆ ಎಂದು ಹೇಳಿದರು.
ಬ್ಯಾಂಕ್ ವಹಿವಾಟು ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿದೆ. ಇದರಿಂದಾಗಿ ಗ್ರಾಹಕರ ಅನುಕೂಲಕ್ಕಾಗಿ ಬಡ್ಡಿದರಗಳನ್ನು ಕಡಿತ ಮಾಡುವ ನಿರೀಕ್ಷೆಯಿದೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೂನ್ 2ರಂದು ಆರ್ ಬಿಐ 0.25ರಷ್ಟು ಕಾರ್ಯನೀತಿ ದರವನ್ನು ಇಳಿಸಿದ ನಂತರ ಎಸ್ ಬಿ ಐ ಸೇರಿದಂತೆ ದೊಡ್ಡ ಸಾರ್ವಜನಿಕ ವಲಯ ಬ್ಯಾಂಕುಗಳು ತಮ್ಮ ಕನಿಷ್ಠ ಸಾಲ ದರಗಳನ್ನು ಕಡಿತ ಮಾಡಿವೆ. ಆರ್ ಬಿಐ ಶೇ 0.75 ರಷ್ಟು ರೆಪೋ ದರವನ್ನು ಕಡಿಮೆ ಮಾಡಿದ್ದು, ರೆಪೋ ದರ ಈಗ ಶೇ 7.25 ರಷ್ಟಿದೆ.
Advertisement