ಕೇಂದ್ರ 'ಪರಿಸರ' ದಿಂದ ನೆಹರೂ,ಗಾಂಧಿ ಹೆಸರು 'ಔಟ್'?

ಭಾರತದ ರಾಜಕೀಯದಿಂದ ನೆಹರೂ ಮತ್ತು ಗಾಂಧಿ ಹೆಸರನ್ನು ಹೇಳದಿರಲು ಹೊರಟಿರುವ ಎನ್ ಡಿಎ ಸರ್ಕಾರ, ಅದರ ಭಾಗವಾಗಿ ನೆಹರೂ ಮತ್ತು ಗಾಂಧಿ ಹೆಸರುಗಳಲ್ಲಿ ನೀಡುವ ಪ್ರಶಸ್ತಿಗಳ ಹೆಸರುಗಳಲ್ಲು ತೆಗೆದುಹಾಕಿ ಬೇರೆ ಹೆಸರಿಡಲು ತೀರ್ಮಾನಿಸಿದೆ...
ನೆಹರೂ-ಗಾಂಧಿ ಹೆಸರನ್ನು ಪರಿಸರ ಪ್ರಶಸ್ತಿಯಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನೆಹರೂ-ಗಾಂಧಿ ಹೆಸರನ್ನು ಪರಿಸರ ಪ್ರಶಸ್ತಿಯಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ: ಹೆಸರಲ್ಲೇನಿದೆ? ಅಂತ ಇಂಗ್ಲಿಷಿನ ಖ್ಯಾತ ಕವಿ,ನಾಟಕಗಾರ ಶೇಕ್ಸ್ ಪಿಯರ್ ಕೇಳಿದ್ದನು. ಆದರೆ ಹೆಸರಿಗೆ ಬೆಲೆ ಕೊಡುವವರು ನಮ್ಮ ಸುತ್ತಮುತ್ತ ಬೇಕಾದಷ್ಟು ಜನ ಇದ್ದಾರೆ. 'ಅವನ ಹೆಸರು ಹೇಳಿದರೆ ನಂಗೆ ಕೋಪ ಬರುತ್ತೆ' ಅಂತ ಕೆಲವರು ಮುಖ ಸಿಂಡರಿಸಿಕೊಳ್ಳುವುದನ್ನು ನಾವು ನೋಡುತ್ತೇವೆ.

ಕೇಂದ್ರ ಸರ್ಕಾರ ಇಂತಹುದೇ ಕೆಲಸ ಮಾಡಲು ಹೊರಟಿದೆ.ರಾಜಕೀಯ ಮೇಲಾಟದಲ್ಲಿ ಹೊಸ ಹೆಸರಿಡುವುದು ಅಥವಾ ಹೆಸರು ಬದಲಾಯಿಸುವುದು ಸಾಮಾನ್ಯ. ಭಾರತೀಯ ಜನತಾ ಪಕ್ಷಕ್ಕೆ ನೆಹರೂ, ಗಾಂಧಿ ಮನೆತನದ ಹೆಸರು ಎಂದರೆ ಮೊದಲಿನಿಂದಲೂ ಅಲರ್ಜಿ. ಹೀಗಾಗಿ ಭಾರತದ ರಾಜಕೀಯದಿಂದ ನೆಹರೂ ಮತ್ತು ಗಾಂಧಿ  ಹೆಸರನ್ನು ಹೇಳದಿರಲು ಹೊರಟಿರುವ ಎನ್ ಡಿಎ ಸರ್ಕಾರ, ಅದರ ಭಾಗವಾಗಿ ನೆಹರೂ ಮತ್ತು ಗಾಂಧಿ ಹೆಸರುಗಳಲ್ಲಿ ನೀಡುವ ಪ್ರಶಸ್ತಿಗಳ ಹೆಸರುಗಳಲ್ಲು ತೆಗೆದುಹಾಕಿ ಬೇರೆ ಹೆಸರಿಡಲು ತೀರ್ಮಾನಿಸಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ, ಪ್ರಮುಖ ಪ್ರಶಸ್ತಿಗಳ ಹೆಸರುಗಳನ್ನು ಬದಲಾಯಿಸಲು ನಿರ್ಧರಿಸಿದೆ. ಪರಿಸರ ಖಾತೆ ಪ್ರತಿವರ್ಷ ನೀಡುವ ಹಲವಾರು ಪ್ರಶಸ್ತಿಗಳಲ್ಲಿ ನಾಲ್ಕರಲ್ಲಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರುಗಳಿವೆ. ಅವುಗಳನ್ನು ಬದಲಿಸಿ ಬೇರೆ ಹೆಸರನ್ನಿಡಲು ತೀರ್ಮಾನಿಸಿದ್ದಲ್ಲದೆ ದೆಹಲಿಯಲ್ಲಿರುವ ಇಂದಿರಾ ಪರ್ಯಾವರಣ್ ಭವನ್ ಪರಿಸರ ಸಚಿವಾಲಯದ ಕಚೇರಿ ಹೆಸರನ್ನು ತೆಗೆದುಹಾಕಿ ಕೇವಲ ಪರ್ಯಾವರಣ್ ಭವನ್ ಎಂದಿಡಲು ನಿರ್ಧರಿಸಿದೆ.

ಆದರೆ ಈ ಸಂದರ್ಭದಲ್ಲಿ ಯಾವುದೇ ವಿವಾದಗಳಾಗದಂತೆ ಎಚ್ಚರವಹಿಸಲು ಪ್ರಸಿದ್ಧ ವ್ಯಕ್ತಿಗಳ ಹೆಸರಿನ್ನು ಬಿಟ್ಟು ರಾಷ್ಟ್ರೀಯ ಪರಿಸರ ಪ್ರಶಸ್ತಿ ಎಂದು ನೀಡಲು ಚಿಂತನೆ ನಡೆಸುತ್ತಿದೆ.

ಕಳೆದ ಏಪ್ರಿಲ್ ನಲ್ಲಿ ಎನ್ ಡಿಎ ಸರ್ಕಾರ, ಹಿಂದಿ ಭಾಷೆಯನ್ನು ಪ್ರಚಾರ ಮಾಡುವವರಿಗಾಗಿ ನೀಡುವ ಪ್ರಶಸ್ತಿಯಿಂದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರನ್ನು ತೆಗೆದುಹಾಕಿತ್ತು. ಹಿಂದಿ ಭಾಷೆಯನ್ನು ಅಧಿಕೃತ ಭಾಷೆ ಎಂದು ಅಭಿವೃದ್ಧಿಪಡಿಸಲು ಹೊರಟಿರುವ ಕೇಂದ್ರ ಸರ್ಕಾರ ಆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುವವರಿಗೆ ಹೊಸ ಎರಡು ಯೋಜನೆಗಳನ್ನು ಜಾರಿಗೆ ತಂದಿತ್ತು.

ಇಂದಿರಾಗಾಂಧಿ ಪರ್ಯಾವರಣ್ ಪುರಸ್ಕಾರ, ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ತಂತ್ರಜ್ಞಾನ ಅಳವಡಿಕೆಗೆ ನೀಡುವ ರಾಜೀವ್ ಗಾಂಧಿ ಪರಿಸರ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ವನ್ಯಮೃಗ ಸಂರಕ್ಷಣಾ ಪ್ರಶಸ್ತಿಯನ್ನು ಪರಿಸರ ಸಚಿವಾಲಯ ತೆಗೆದುಹಾಕಿದೆ.
ಪರಿಸರಕ್ಕೆ ಸಂಬಂಧಿಸಿದಂತೆ ವ್ಯಕ್ತಿ, ಸಂಘ-ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯಲ್ಲಿ ಗೌರವವಿರುತ್ತದೆ. ಅವು ಪದ್ಮಭೂಷಣ, ಪದ್ಮವಿಭೂಷಣ, ಪರಮಚಕ್ರ ಮೊದಲಾದ ಪ್ರಶಸ್ತಿಗಳಿಗೆ ಸಮ. ಹಾಗಾಗಿ ವ್ಯಕ್ತಿ ಕೇಂದ್ರಿತ ಹೆಸರುಗಳನ್ನು ತೆಗೆಯಲಾಗುವುದು ಎಂದು ಪರಿಸರ ಮತ್ತು ಅರಣ್ಯ ಖಾತೆ ತಿಳಿಸಿದೆ.

2013-14ನೇ ಸಾಲಿನ ಪರಿಸರ ಪ್ರಶಸ್ತಿಯನ್ನು ಇನ್ನೂ ಕೇಂದ್ರ ಸರ್ಕಾರ ಪ್ರಕಟಿಸಿಲ್ಲ. ಪ್ರಶಸ್ತಿಯ 10 ಬೆಳ್ಳಿ ತಾವರೆ ಟ್ರೋಫಿಗಳನ್ನು ತಯಾರಿಸಲು ಟೆಂಡರ್ ಕರೆಯಲಾಗಿದೆ. 1987ರಲ್ಲಿ ನೀಡಲು ಆರಂಭಿಸಿದ್ದ ಇಂದಿರಾಗಾಂಧಿ ಪರ್ಯಾವರಣ್ ಪುರಸ್ಕಾರ ವೈಯಕ್ತಿಕ ವಿಭಾಗದಲ್ಲಿ  5 ಲಕ್ಷ ರೂಪಾಯಿ ಒಳಗೊಂಡಿದೆ.

ಎನ್ ಡಿಎ ಸರ್ಕಾರ, ಜವಹರಲಾಲ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆ, ಇಂದಿರಾ ಗಾಂಧಿ ಆವಾಸ್ ಯೋಜನೆ ಮತ್ತು ವಿಶ್ವವಿದ್ಯಾಲಯ ಕಾರ್ಯಕ್ರಮಗಳಿಗೆ ಇರುವ ರಾಜೀವ್ ಗಾಂಧಿ ಹೆಸರನ್ನು ತೆಗೆಯಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಪ್ರಸ್ತಾಪ ಹೊರಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com