
ಲಖನೌ: ಪತ್ರಕರ್ತ ಜಗೇಂದ್ರ ಸಿಂಗ್ ಹತ್ಯೆ ಪ್ರಕರಣದ ಆರೋಪಿ, ಉತ್ತರಪ್ರದೇಶ ಸಚಿವ ರಾಮ್ ಮೂರ್ತಿ ವರ್ಮಾ ವಜಾಗೆ ಮತಬ್ಯಾಂಕ್ ಅಡ್ಡಿಯಾಗಿದೆಯೇ? ಹೌದು ಎನ್ನುತ್ತದೆ ಎಸ್ಪಿ ಮೂಲಗಳು.
ಪತ್ರಕರ್ತನ ಸಜೀವ ದಹನದ ಆರೋಪ ಎದುರಿಸುತ್ತಿರುವ ಸಚಿವನನ್ನು ಕೂಡಲೇ ವಜಾ ಮಾಡಬೇಕೆಂದು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಒತ್ತಡಕ್ಕೊಳಗಾಗಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ವರ್ಮಾ ವಜಾ ಬಗ್ಗೆ ನಿರ್ಧಾರ ಕೈಗೊಳ್ಳಲೆಂದು ಶನಿವಾರ ತಮ್ಮ ಆಪ್ತರೊಂದಿಗೆ ಸಭೆ ನಡೆಸಿದ್ದಾರೆ. ಆದರೆ, ವಜಾ ವಿಚಾರದಲ್ಲಿ ಸಮಾಜವಾದಿ ಪಕ್ಷದೊಳಗೇ ಭಿನ್ನಾಭಿಪ್ರಾಯ ಉಂಟಾಗಿದೆ. ಸ್ವತಃ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೇ ಆರೋಪಿ ಸಚಿವರನ್ನು ವಜಾ ಮಾಡಲು ಮನಸ್ಸಿಲ್ಲ. ಇದಕ್ಕೆ ಕಾರಣ ಕುರ್ಮಿ ಮತಬ್ಯಾಂಕ್. ಕುರ್ಮಿ ಸಮುದಾಯಕ್ಕೆ ಸೇರಿದ 5 ಲಕ್ಷದಷ್ಟು ಮಂದಿ ಉತ್ತರಪ್ರದೇಶದಲ್ಲಿದ್ದಾರೆ. ಇದೇ ವೇಳೆ, ಪತ್ರಕರ್ತ ಸಿಂಗ್ ಹತ್ಯೆ ಸಂಬಂಧ ಶನಿವಾರ ಐವರು ಪೊಲೀಸರನ್ನು ಸರ್ಕಾರ ಅಮಾನತು ಮಾಡಿದೆ. ಪತ್ರಕರ್ತನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯ್ಕ ಅವರು ಸಿಎಂ ಅಖಿಲೇಶ್ ಯಾದವ್‍ಗೆ ಪತ್ರ ಬರೆದಿದ್ದಾರೆ.
ಮುಲಾಯಂ ವಿರೋಧ: ಪಕ್ಷದ ಮತಬ್ಯಾಂಕ್‍ಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ವರ್ಮಾರನ್ನು ವಜಾ ಮಾಡಲು ಮುಲಾಯಂ ಅವರೇ ಅಡ್ಡಗಾಲು ಹಾಕುತ್ತಿದ್ದಾರೆ. ಪಕ್ಷದ ಮತ್ತೊಬ್ಬ ಪ್ರಮುಖ ನಾಯಕ ರಾಮ್ ಗೋಪಾಲ್ ಯಾದವ್ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಸ್ಪಿ ಶಾಸಕ ಭುಕಾಲ್ ನವಾಬ್, ``ಜಗೇಂದ್ರ ಅವರಿಗಾದ ಅನ್ಯಾಯದ ಬಗ್ಗೆ ನೋವಿದೆ. ಆ ಘಟನೆಯನ್ನು ನಾವು ಖಂಡಿಸುತ್ತೇವೆ. ಆದರೆ, ಅವರು ಪತ್ರಕರ್ತನಲ್ಲ. ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು
ಅಷ್ಟೆ. ಅವರ ಕೊಲೆಗೂ ರಾಮಮೂರ್ತಿ ವರ್ಮಾರಿಗೂ ಸಂಬಂಧವಿಲ್ಲ. ಆ ಬಗ್ಗೆ ಸಿಬಿಐ ತನಿಖೆಯಾದರೂ ನಡೆಯಲಿ. ವರ್ಮಾ ಅಮಾಯಕರೆಂದು ನಮಗೆ ಗೊತ್ತು'' ಎಂದಿದ್ದಾರೆ.
ಜಗೇಂದ್ರ ಸಿಂಗ್ ಅವರು ಪತ್ರಿಕೆಯೊಂದರಲ್ಲಿ ಸಚಿವ ವರ್ಮಾ ಅವರ ಅಕ್ರಮಗಳ ಬಗ್ಗೆ ವರದಿ ಮಾಡಿದ್ದರು.
ಇದು ವರ್ಮಾರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವೇಳೆ, ಪೊಲೀಸ್ ಅಧಿಕಾರಿಗಳೇ ಸಿಂಗ್‍ಗೆ ಬೆಂಕಿ ಹಚ್ಚಿದರು ಎಂಬ ಮಾತನ್ನು ಸಿಂಗ್ ಕುಟುಂಬ ಸದಸ್ಯರು ಪುನರುಚ್ಚರಿಸಿದ್ದಾರೆ.
Advertisement