ಆರ್ ಎಸ್ ಎಸ್ ನಿಷೇಧಕ್ಕೆ ಪಟೇಲ್ ಗೆ ನೆಹರು ತೀವ್ರ ಒತ್ತಡ ಹೇರಿದ್ದರು!

ಗಾಂಧಿ ಹತ್ಯೆ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ .ಎಸ್.ಎಸ್)ಕ್ಕೆ ನಿಷೇಧ ವಿಧಿಸಲು ಅಂದಿನ ಪ್ರಧಾನಿ ನೆಹರೂ ಅವರು ಗೃಹ ಸಚಿವ ಸರ್ದಾರ್ ಪಟೇಲ್ ಅವರ ಮೇಲೆ ತೀವ್ರ ಒತ್ತಡ ಹೇರಿದ್ದರು
ಸರ್ದಾರ್ ವಲ್ಲಭ ಭಾಯ್ ಪಟೇಲ್-ನೆಹರು
ಸರ್ದಾರ್ ವಲ್ಲಭ ಭಾಯ್ ಪಟೇಲ್-ನೆಹರು

ನವದೆಹಲಿ: ಗಾಂಧಿ ಹತ್ಯೆ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್. ಎಸ್.ಎಸ್)ಕ್ಕೆ ನಿಷೇಧ ವಿಧಿಸಲು ಅಂದಿನ ಪ್ರಧಾನಿ ನೆಹರು ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್  ಅವರ ಮೇಲೆ ತೀವ್ರ ಒತ್ತಡ ಹೇರಿದ್ದರು ಎಂಬ ಮಾಹಿತಿ  ಬಹಿರಂಗವಾಗಿದೆ. 

ಈ ಜೂನ್ 25 ಕ್ಕೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ 40 ವರ್ಷಗಳು ಕಳೆಯಲಿದೆ. ಆದರೆ 1975ಕ್ಕೂ ಮುನ್ನ ಅಂದರೆ ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಅವಧಿಯಲ್ಲೇ ತುರ್ತು ಪರಿಸ್ಥಿತಿಯ ಮಾದರಿಯ ಸ್ಥಿತಿ ಉಂಟಾಗಿ ಪ್ರಜಾಪ್ರಭುತ್ವವನ್ನು ಅಪವಿತ್ರಗೊಳಿಸುವ ಕೆಲಸ ನಡೆದಿತ್ತು.

ಇಂದಿರಾ ಗಾಂಧಿ ಅವಧಿಯಲ್ಲಿ ಹೇಗೆ ತುರ್ತು ಪರಿಸ್ಥಿತಿಯ ಸುಳಿವು ನೀಡದೇ ಬಂಧಿಸುವುದಕ್ಕೆ ಆರ್.ಎಸ್.ಎಸ್  ನ ಪ್ರಮುಖರ ಹೆಸರನ್ನು ಪಟ್ಟಿ ಮಾಡುವಂತೆ ಸೂಚಿಸಲಾಗಿತ್ತೋ ಹಾಗೆಯೇ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ  ಆರ್.ಎಸ್. ಎಸ್ ಗೆ ನಿಷೇಧ ವಿಧಿಸಿದ್ದ ಸಂದರ್ಭದಲ್ಲಿ  ಸರ್ಕಾರಿ ನೌಕರರು, 15 ವರ್ಷದ ಮಕ್ಕಳ ಮೇಲೂ ಆರ್.ಎಸ್.ಎಸ್  ನಂಟು ಹೊಂದಿರುವ ಆರೋಪದಡಿ ಪ್ರಕರಣ ದಾಖಲಿಸಲು ನೆಹರು ಸೂಚನೆ ನೀಡಿದ್ದರಂತೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ  ಪ್ರಕಟವಾಗಿರುವ ವರದಿ ಪ್ರಕಾರ, ಆರ್.ಎಸ್.ಎಸ್  ನೊಂದಿಗೆ  ಸಂಪರ್ಕ ಹೊಂದಿದ್ದ ಶಂಕೆಯಿಂದ  ಸರ್ಕಾರಿ ನೌಕರರನ್ನು ವಿಚಾರಣೆ ನಡೆಸಲು ಬಂಧಿಸಲಾಗುತ್ತಿತ್ತು. ಅಷ್ಟೇ ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಆರ್.ಎಸ್.ಎಸ್ ಗೆ ಸಹಾನುಭೂತಿ ತೋರಿರುವ ಆರೋಪದಡಿ ಬಂಧಿಸಲಾಗುತ್ತಿತ್ತು ಎಂಬ ವಿಷಯ ಬಯಲಾಗಿದೆ. ಬಂಧನಕ್ಕೊಳಗಾದ  ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿತ್ತು. ಸರ್ಕಾರಿ ನೌಕರರು  ಹಾಗೂ ವಿದ್ಯಾರ್ಥಿಗಳು ಸಂಘದ  ನಂಟು ಹೊಂದಿರುವ ಬಗ್ಗೆ ಮಾಹಿತಿ ಪಡೆಯಲು ಗುಪ್ತಚರ ಇಲಾಖೆಯನ್ನು ಬಳಸಿಕೊಳ್ಳಲಾಗಿತ್ತು. ವಿಚಿತ್ರವೆಂದರೆ ನೆಹರೂ ಅವಧಿಯಲ್ಲಿ ಆರ್.ಎಸ್.ಎಸ್ ಪಥ ಸಂಚಲನವನ್ನು ನೋಡಿದ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತುಗೋಳಿಸಲು ಆದೇಶ ನೀಡಲಾಗಿತ್ತು. ಅಂದಿನ ಸ್ಥಿತಿ ತುರ್ತು ಪರಿಸ್ಥಿತಿಯಂತೆಯೆ ಇತ್ತು ಎಂದು ವಿಶ್ಲೇಷಿಸಲಾಗಿದೆ. ಅಂದಿನ ಗೃಹ ಸಚಿವ ಸರ್ದಾರ್ ಪಟೇಲ್  ಆರ್.ಎಸ್.ಎಸ್ ಬಗ್ಗೆ ಮೃದು ಧೋರಣೆ ಹೊಂದಿದ್ದರಾದರೂ ನೆಹರು ತೀವ್ರ ಒತ್ತಡದಿಂದ  ನಿಷೇಧ ಹೇರುವ ನಿರ್ಯಣವನ್ನು ಒಪ್ಪಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ನಿಷೇಧ ವಿಷಯಕ್ಕೆ ಸಂಬಂಧಿಸಿದಂತೆ  ಪ್ರಧಾನಿ ನೆಹರು ಅವರನ್ನು  ಭೇಟಿ ಮಾಡಿ ಮಾತನಾಡಲು ಆರ್.ಎಸ್ ಎಸ್ ನ ಅಂದಿನ ಸರಸಂಚಾಲಕರಾಗಿದ್ದ ಮಾಧವ್  ಸದಾಶಿವ್  ಗೋಳ್ವಲ್ಕರ್  ಮನವಿ ಮಾಡಿದ್ದರು. ಭೇಟಿಯಿಂದ ಯಾವುದೇ ಪ್ರಯೋಜನವಾಗುಗುವುದಿಲ್ಲ ಎಂದು ನೆಹರು ತಿರಸ್ಕರಿಸಿದ್ದರು. 1948 ರ ಡಿ.24 ರಂದು ಅಂದಿನ ಮುಖ್ಯ ಕಾರ್ಯದರ್ಶಿ ವಿ.ವಿಶ್ವನಾಥನ್ ಕೇಂದ್ರ ಸರ್ಕಾರಕ್ಕೆ ನೀಡಿದ  ಮಾಹಿತಿಯಲ್ಲಿ  81 ಸರ್ಕಾರಿ ಅಧಿಕಾರಿಗಳನ್ನು 24 ವಿದ್ಯಾರ್ಥಿಗಳನ್ನು ಬಂಧಿಸಿ,  ಸರ್ಕಾರಿ ನೌಕರರ  ಅಮಾನತಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com