
ನವದೆಹಲಿ: ಕೇಂದ್ರ ಸರ್ಕಾರದ ವಿಳಂಬ ನೀತಿಗೆ ತೀವ್ರ ಆಕ್ರೋಶಗೊಂಡಿರುವ ನಿವೃತ್ತ ಸೈನಿಕರು, ಸಮಾನ ಹುದ್ದೆ ಸಮಾನ ಪಿಂಚಣಿ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಬೇಕೆಂದು ಆಗ್ರಹಿಸಿ ಭಾನುವಾರ ದೇಶಾದ್ಯಂತ ಪ್ರತಿಭಟನೆಗಿಳಿದಿದ್ದಾರೆ. ಭಾರತೀಯ ನಿವೃತ್ತ ಯೋಧರ ಚಳವಳಿ (ಐಇಎಸ್ ಎಂ) ವತಿಯಿಂದ ಇಲ್ಲಿನ ಜಂತರ್‍ಮಂತರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಿವೃತ್ತ ಸೈನಿಕರು, ಕೇಂದ್ರ ಸರ್ಕಾರ ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಶೀಘ್ರ ಜಾರಿ ಮಾಡಬೇಕು. ಇಲ್ಲದಿದ್ದರೆ, ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ನಿವೃತ್ತ ಸೈನಿಕರ ಸಮಸ್ಯೆ ಬಗ್ಗೆ ನಮಗೆ ಅರಿವಿದ್ದು, ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು. ಆದರೆ, ಎಂದು ಇದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಅವಧಿ ಮಿತಿಯನ್ನು ನಿಗದಿಪಡಿಸಿಲ್ಲ. ಈಗಾಗಲೇ ಭರವಸೆ ನೀಡಿ ವರ್ಷ ಕಳೆದಿದೆ. ಹೀಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದಿದ್ದಾರೆ. ಈ ವೇಳೆ ಮಾತನಾಡಿದ ಪ್ರತಿಭಟ ನಾಕಾರರು, ಈ ಬಗ್ಗೆ ರಾಷ್ಟ್ರಪತಿ ಪ್ರಣಬ್‍ರನ್ನು ಭೇಟಿ ಮಾಡಲೂ ಪ್ರಯತ್ನಿಸಲಾಗುತ್ತಿದೆ. ಅವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹ ರಿಸಬೇಕು. ಇದೀಗ ಕೆಲವು ರೈತ ಸಂಘಟನೆಗಳು ಹಾಗೂ ದೆಹಲಿ ಮತ್ತು ಜವಾಹರ್‍ಲಾಲ್ ನೆಹರೂ ವಿವಿಗಳ ವಿದ್ಯಾರ್ಥಿಗಳೂ ತಮ್ಮೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಬಲಬಂದಂತಾಗಿದೆ.ಯೋಜನೆ ಶೀಘ್ರ ಜಾರಿ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ, ಈ ಬಗ್ಗೆ ಯಾವುದೇ ಸುಳಿವು ನೀಡಲಾಗಿಲ್ಲ. ಇನ್ನೂ ಕೆಲವು ದಿನ ಕಾಯಿರಿ ಎಂಬ ಉತ್ತರ ನೀಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ಸಮಾನ ಹುದ್ದೆ ಸಮಾನ ಪಿಂಚಣಿ ವಿಷಯದಲ್ಲಿ ನಾವು ನೀಡಿದ್ದ ಆಶ್ವಾಸನೆಗೆ ಈಗಲೂ ಬದ್ಧವಾಗಿದ್ದೇವೆ. ಬೇಡಿಕೆನ್ನು ಖಂಡಿತಾ ಈಡೇರಿಸುತ್ತೇವೆ. ಆದರೆ, ಕೆಲವು ಮಂದಿ ತಾಳ್ಮೆಯಿಂದ ಇರಬೇಕಾಗುತ್ತದೆ ಎಂದು
ಹೇಳಿದ್ದಾರೆ. ದೇಶಾದ್ಯಂತ ನಡೆದ ಪ್ರತಿಭಟನೆಯಲ್ಲಿ ಸುಮಾರು 22 ಲಕ್ಷಕ್ಕೂ ಹೆಚ್ಚು ನಿವೃತ್ತ ಯೋಧರು ಮತ್ತು ಸುಮಾರು 6 ಲಕ್ಷಕ್ಕೂ ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರ ಪತ್ನಿಯರು ಭಾಗವಹಿಸಿದ್ದು, ಯೋಜನೆಯನ್ನು ಶೀಘ್ರ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿವೃತ್ತಯೋಧ ವಿ.ಕೆ. ಗಾಂಧಿ ಸೋಮವಾರ ಉಪವಾಸ ಸತ್ಯಾಗ್ರಹಹಮ್ಮಿಕೊಳ್ಳಲಿದ್ದೇವೆ. ಅದಕ್ಕೂ ಮೊದಲು ಕೇಂದ್ರ ಸರ್ಕಾರಕ್ಕೆ ರಕ್ತದಲ್ಲಿ ಬರೆದ ಮನವಿ ಪತ್ರ ನೀಡಲಾಗುವುದು. ಇದನ್ನು ನಮ್ಮ ಕೊನೆಯ ಪ್ರಯತ್ನವಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಮಾನ ಹುದ್ದೆ, ಸಮಾನ ಪಿಂಚಣಿಯು ಯೋಧರ ನ್ಯಾಯಸಮ್ಮತ ಹಕ್ಕು. ಆದರೆ ಅದಕ್ಕಾಗಿ ಅವರು ಇಷ್ಟೊಂದು ದೀರ್ಘಕಾಲ ಹೋರಾಡಬೇಕಾಗಿ ಬಂದಿರುವುದು ದುರಂತ. ಸರ್ಕಾರವು ತ್ವರಿತವಾಗಿ ಈ ಯೋಜನೆ ಅನುಷ್ಠಾನ ಮಾಡಲಿ ಮತ್ತು ಜುಲೈ 26ರ ಕಾರ್ಗಿಲ್ ವಿಜಯ ದಿವಸದಂದೇ ಇದನ್ನು ಘೋಷಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ,
ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರ್ರಿಕರ್‍ರನ್ನು ಕೇಳಿಕೊಳ್ಳುತ್ತೇನೆ.
- ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ
Advertisement