
ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರು ವೀಸಾ ಪಡೆಯಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಹಾಯ ಮಾಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟನೆ ನೀಡಬೇಕು ಎಂದು ಸೋಮವಾರ ಪ್ರತಿಪಕ್ಷಗಳು ಒತ್ತಾಯಿಸಿವೆ. ಸುಷ್ಮಾ ಸ್ವರಾಜ್ ರಾಜಿನಾಮೆ ಪಟ್ಟು ಹಿಡಿದಿವೆ.
ಸುಷ್ಮಾ ಬೆಂಬಲಕ್ಕೆ ನಿಂತಿರುವ ಬಿಜೆಪಿಯನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕ್ಷಮೆಯಾಚಿಸಬೇಕು ಎಂತು ಆಗ್ರಹಿಸಿದೆ.
'ಮೋದಿ'ಗಾಗಿ ಲಲಿತ್ ಮೋದಿಗೆ ಭಾರತ ಸರ್ಕಾರ ಸಹಾಯ ಮಾಡಿದೆ.... ' ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಬಿಜೆಪಿಯ ದ್ವಿಮುಖ ನೀತಿಯನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರು ಹೇಳಿದ್ದಾರೆ.
ಸರ್ಕಾರ ಮತ್ತು ಸುಷ್ಮಾ ಸ್ವರಾಜ್ ಇಬ್ಬರು ಇದಕ್ಕೆ ಹೊಣೆಗಾರರು. ಹೀಗಾಗಿ ಸುಷ್ಮಾ ಸ್ವರಾಜ್ ಅವರು ಈ ಕೂಡಲೇ ರಾಜಿನಾಮೆ ನೀಡಬೇಕು ಮತ್ತು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ತಿವಾರಿ ಒತ್ತಾಯಿಸಿದ್ದಾರೆ.
ಇನ್ನು ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಂ ಯೆಚುರಿ ಅವರು ಸಹ, ಕಳಂಕಿತ ಲಲಿತ್ ಮೋದಿ ಹೇಗೆ ನೆರವು ನೀಡಲಾಯಿತು ಎಂಬುದರ ಬಗ್ಗೆ ಪ್ರಧಾನಿ ಸಂಸತ್ತಿಗೆ ಮತ್ತು ದೇಶದ ಜನತೆಗೆ ತಿಳಿಸಬೇಕು ಎಂದಿದ್ದಾರೆ.
Advertisement