
ಮುಂಬೈ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿಯಿಂದ ಹೊರ ಹಾಕುವ ಉದ್ದೇಶದಿಂದ ಪಕ್ಷದೊಳಗೆ 'ರಾಜಕೀಯ ಮೇಲಾಟ' ನಡೆಯುತ್ತಿದೆ ಎಂದು ಮಿತ್ರ ಪಕ್ಷ ಶಿವಸೇನೆ ಮಂಗಳವಾರ ಆರೋಪಿಸಿದೆ.
ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿದ ಪ್ರಕರಣದಲ್ಲಿ ವಿದೇಶಾಂಗ ಸಚಿವೆಯ ಬೆಂಬಲಕ್ಕೆ ನಿಂತಿರುವ ಶಿವಸೇನೆ, ಶುದ್ಧ ಹಸ್ತದ ಸುಷ್ಮಾ ಸ್ವರಾಜ್ ಅವರ ವಿರುದ್ಧದ ಅಪಪ್ರಚಾರದ ಹಿಂದಿರುವ ಕೈಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಸುಷ್ಮಾ ಸ್ವರಾಜ್ ಅವರು ರಾಜಿನಾಮೆ ನೀಡಬೇಕು ಎಂಬ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಕ್ಕೆ ತಿರುಗೇಟು ನೀಡಿರುವ ಸೇನೆ, ಸುಷ್ಮಾ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಥವಾ ಕಸಬ್ಗೆ ಜಾಮೀನು ಕೊಡಿಸಲು ಸಹಾಯ ಮಾಡಿದ್ದಾರೆ ಎನ್ನುವ ರೀತಿ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದೆ.
ಕೆಲವು ಮಾಧ್ಯಮಗಳು ಈ ವಿವಾದವನ್ನು ಅನಗತ್ಯವಾಗಿ ದೊಡ್ಡದು ಮಾಡುತ್ತಿವೆ ಎಂದಿರುವ ಶಿವಸೇನೆ, ಈ ಬಗ್ಗೆ ನರೇಂದ್ರ ಮೋದಿ ಅವರು ವಿಸ್ತೃತ ತನಿಖೆ ನಡೆಸಬೇಕು ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಒತ್ತಾಯಿಸಿದೆ.
ಶಿವಸೇನೆ ಎನ್.ಡಿ.ಎ ಸರ್ಕಾರದ ಅತಿ ದೊಡ್ಡ ಮೈತ್ರಿ ಪಕ್ಷವಾಗಿದ್ದು, ಸುಷ್ಮಾ ಸ್ವರಾಜ್ ಶಿವಸೇನೆಯೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೂ ಮುನ್ನ ಶಿವಸೇನೆ ಸುಷ್ಮಾ ಸ್ವರಾಜ್ ಪ್ರಧಾನಿಯಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
Advertisement