ಹರೀಶ್ ನೋಡೋಕೆ ಬಂದ ಅಯ್ಯರ್ ವರ !

ಮುಂಬೈನ ಹರೀಶ್ ಅಯ್ಯರ್ ಕುಟುಂಬವೀಗ ಸಂಭ್ರಮದಲ್ಲಿದೆ. ಮಿಡ್ ಡೇ ಪತ್ರಿಕೆಯಲ್ಲಿ ಪ್ರಕಟವಾದ "ಸಲಿಂಗಿ ವರ ಬೇಕಿದೆ'' ಜಾಹೀರಾತಿಗೆ ಉತ್ತಮ ಸ್ಪಂದನೆ ಸಿಕ್ಕಿದೆ...
ಹರೀಶ್ ಅಯ್ಯರ್
ಹರೀಶ್ ಅಯ್ಯರ್

ಮುಂಬೈ: ಸಲಿಂಗಿ ವರನಿಗಾಗಿ ಜಾಹೀರಾತು ನೀಡಿ ಕ್ರಾಂತಿ ಮಾಡಿದ್ದ ಮುಂಬೈನ ಹರೀಶ್ ಅಯ್ಯರ್ ಕುಟುಂಬವೀಗ ಸಂಭ್ರಮದಲ್ಲಿದೆ. ಮಿಡ್ ಡೇ ಪತ್ರಿಕೆಯಲ್ಲಿ ಪ್ರಕಟವಾದ "ಸಲಿಂಗಿ ವರ ಬೇಕಿದೆ'' ಜಾಹೀರಾತಿಗೆ ಉತ್ತಮ ಸ್ಪಂದನೆ ಸಿಕ್ಕಿದೆ.

ತಾಯಿ ಪದ್ಮಾ ಒತ್ತಾಸೆಯಂತೆ ಹರೀಶ್ ನೀಡಿದ್ದ ಜಾಹೀರಾತಿಗೆ ಮೇ 20ರ ವೇಳೆಗೆ 6 ಮಂದಿ ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಇಬ್ಬರು ಅಯ್ಯರ್, ಇಬ್ಬರು ಮುಸ್ಲಿಂ ಮತ್ತಿಬ್ಬರು ಇತರೆ ಜಾತಿಯವರು. ಮೊದಲು ಸ್ಪಂದಿಸಿದ್ದ ಒಬ್ಬ ಅಯ್ಯರ್ ಹುಡುಗನನ್ನು ಹರೀಶ್ ಭಾನುವಾರ ಭೇಟಿಯಾಗಿ ನಂತರ ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಮನೆಯಲ್ಲಿ ಅವರ ತಂದೆ ವಿಶ್ವನಾಥ್ ಅಯ್ಯರ್, ತಾಯಿ ಪದ್ಮ ಮತ್ತು ಅಜ್ಜಿ ಹುಡುಗನನ್ನು ಸ್ವಾಗತಿಸಿದ್ದಾರೆ. ನೀಲಿ ಜೀನ್ಸ್ ಪ್ಯಾಂಟ್, ಅದೇ ಬಣ್ಣದ ಟಿ-ಶರ್ಟ್, ಬೂಟ್ ಧರಿಸಿದ್ದ ಯುವಕ ಹರೀಶ್ ಕುಟುಂಬದವರಿಗೆ ಆಕರ್ಷಿತನಾಗಿ ಕಂಡಿದ್ದಾನೆ. ಮಗನಿಗೆ ವರ ಬೇಕೆಂದು ಜಾಹೀರಾತು ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಜ್ಜಿಯೂ ಇಷ್ಟಪಟ್ಟಿದ್ದಾರೆ.

ಹರೀಶ್ ಸಲಿಂಗಕಾಮಿಯಾಗಿದ್ದರೆ ನಾವೇನು ಮಾಡಲು ಸಾಧ್ಯ? ಅದೆಲ್ಲ ದೈವೇಚ್ಛೆ ಎನ್ನುವ ಹರೀಶ್ ಅಜ್ಜಿಗೆ ವರ ನೀಡಬೇಕೆಂದು ಜಾಹೀರಾತು ನೀಡಿದ ಕುರಿತು ಆರಂಭದಲ್ಲಿ ಅಸಮಾಧಾನವಿತ್ತು, ಅದಕ್ಕೂ ಮೊದಲು ನಮ್ಮ ಹುಡುಗನ ವಿಷಯ ಕೆಲವರಿಗಷ್ಟೆ ಗೊತ್ತಿತ್ತು, ಜಾಹೀರಾತು ನೀಡಿದ ನಂತರ ಸಂಬಂಧಿಕರೆಲ್ಲ ಮಾತಾಡುವಂತಾಗಿದೆ ಎಂಬ ಬೇಸರ ಅಜ್ಜಿಗಿತ್ತು. ಈಗ ಅದು ದೂರವಾಗಿದೆ.

ವರನಾಗಿ ಬಂದಿದ್ದ ಅಯ್ಯರ್ ಎಂಎಸ್ ಸಿ ಪದವೀಧರನಾಗಿದ್ದು, ಮುಂಬೈನಲ್ಲಿ ಸಂಖ್ಯಾತಜ್ಞನಾಗಿ ಕೆಲಸ ಮಾಡುತ್ತಿದ್ದಾನೆ. ಚೆನ್ನೈನಿಂದ 50 ಕಿ.ಮೀ ದೂರದಲ್ಲಿರುವ ಹಳ್ಳಿಯೊಂದರ ಪುರೋಹಿತರ ಮಗನಾದ ಅಯ್ಯರ್ ಗೆ ಹರೀಶ್ ಕುಟುಂಬದವರು ಈಗ ವರ ಪರೀಕ್ಷೆ ನಡೆಸಿದ್ದಾರೆ. ನಿನಗೆ ಶಾಸ್ತ್ರೀಯ ಸಂಗೀತ ಗೊತ್ತೆ? ಎಂದು ಕೇಳಿದ್ದಾರೆ. ಆಗ ಯುವಕ 'ಗಜವದನ ಬೇಡುವೆ' ಭಕ್ತಿಗೀತೆ ಹಾಡಿದ್ದಾನೆ. ಈ ಹುಡುಗ ವಿಶ್ವಾಸಾರ್ಹನಾಗಿದ್ದು, ಮೃದುಭಾಷಿ ಮತ್ತು ವಿನಮ್ರ. ಇವನು ಹರೀಶನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ಅಜ್ಜಿಗೆ ಬಂದಿದೆ ಎಂದು ಪದ್ಮ ಹೇಳುತ್ತಾರೆ.

ಸಲಿಂಗಿ ವರ ಬೇಕೆಂಬ ದೇಶದ ಮೊದಲ ಜಾಹೀರಾತನ್ನು ಪತ್ರಿಕೆಗಳು ತಿರಸ್ಕರಿಸಿದ್ದು, ಕೊನೆಗೆ ಮಿಡ್ ಡೇ ಪ್ರಕಟಿಸಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com