ಸರ್ವರಿಗೂ ಮನೆ

ಎನ್‍ಡಿಎ ಸರ್ಕಾರದ ಬಹು ನಿರೀಕ್ಷಿತ 2022ರ ವೇಳೆಗೆ ಸರ್ವರಿಗೂ ಮನೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬುಧವಾರ...
ಮನೆ (ಸಾಂದರ್ಭಿಕ ಚಿತ್ರ)
ಮನೆ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಎನ್‍ಡಿಎ ಸರ್ಕಾರದ ಬಹು ನಿರೀಕ್ಷಿತ 2022ರ ವೇಳೆಗೆ ಸರ್ವರಿಗೂ ಮನೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬುಧವಾರ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದು ಸೇರಿದಂತೆ ಹಲವಾರು ಪ್ರಮುಖ ನಿರ್ಣಯಗಳಿಗೆ ಅಂಗೀಕಾರ ದೊರೆತಿದೆ. ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ಸಿಕ್ಕಿರುವುದರಿಂದ ಈ ಯೋಜನೆಗೆ ಇದೇ 25 ರಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ನಗರದಲ್ಲಿರುವ ಬಡವರಿಗೆ ಅತೀ ಕಡಿಮೆ ದರದಲ್ಲಿ ಮನೆ ನಿರ್ಮಿಸಿಕೊಳ್ಳಲು ಹಣಕಾಸಿನ ಸಹಾಯ ಮಾಡುವುದು ಈ ಯೋಜನೆಯಪ್ರಮುಖ ಉದ್ದೇಶ. ಕೊಳಚೆ ಪ್ರದೇಶದ ನಿವಾಸಿಗಳು, ಕಡಿಮೆ ಆದಾಯದ ಸಮುದಾಯಗಳು(ಎಲ್‍ಐಜಿ) ಸೇರಿದಂತೆ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) ಗಳಿಗೆ ನೀಡುವ ಗೃಹ ಸಾಲಗಳ ಮೇಲಿನ ವಾರ್ಷಿಕ ಬಡ್ಡಿದರವನ್ನು ಶೇ.6.50ಕ್ಕೆ ಇಳಿಸಬೇಕೆಂಬ ಅಂತರ ಸಚಿವಾಲಯ ಸಮಿತಿ ಶಿಫಾರಸುಗಳ ಜಾರಿಗೆ ತರುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಸಚಿವ ಸಂಪುಟದ ಈ ನಿರ್ಧಾರದಿಂದ ನಗರದ ಪ್ರದೇಶದ  ಫಲಾನುಭವಿಯೊಬ್ಬರಿಗೆ  ರು. 1 ರಿಂದ ರು. 2.30 ಲಕ್ಷದ ವರೆಗೆ ಉಳಿತಾಯವಾಗಲಿದೆ. ಅಲ್ಲದೇ ಅತಿ ಕಡಿಮೆ ಅಂದರೆ, ರು. 2,852 ಗಳಷ್ಟು ಮಾಸಿಕ ಕಂತು ಬರಲಿದೆ. ಸದ್ಯ ಗೃಹ ಸಾಲದ ಮೇಲಿನ ಬಡ್ಡಿದರ ಶೇ.10.50ರಷ್ಟಿದೆ. 15 ವರ್ಷಗಳ ಅವಧಿಗೆ ರು. 6 ಲಕ್ಷ ಸಾಲ ಪಡೆದರೆ ಮಾಸಿಕ ಕಂತಿನ ಮೊತ್ತ
ರು. 6,632 ಗಳಾಗಲಿದೆ. ಬಡ್ಡಿದರ ಶೇ.6.50ಕ್ಕೆ ಇಳಿದರೆ ಮಾಸಿಕ ಕಂತು ರು.4,050 ಗಳಿಗೆ ಇಳಿಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಷ್ಟ್ರೀಯ ನಗರ
ಗೃಹ ನಿರ್ಮಾಣ ಸಂಸ್ಥೆ ಮುಂದಿನ 7 ವರ್ಷಗಳಲ್ಲಿ 2 ಕೋಟಿ ಮನೆ ನಿರ್ಮಿಸುವ ಯೋಜನೆ ಹೊಂದಿದೆ.

ಕೇಂದ್ರ ಸರ್ಕಾರದ ಹೊಸ ಯೋಜನೆ ಯಿಂದ ಪ್ರತಿ ಫಲಾನುಭವಿಗೆ ವಿವಿಧ ರೂಪದಲ್ಲಿ  ರು.1 ರಿಂದ 2.30 ಲಕ್ಷ  ವರೆಗೂ ನೆರವು ಸಿಗಲಿದೆ. ಸಚಿವ ಸಂಪುಟದ ನಿರ್ಧಾರದಿಂದ ಅರ್ಬನ್ ಹೌಸಿಂಗ್ ಮಿಷನ್ ಮೂಲಕ ನಿರ್ಮಿಸುವ, ಸಬ್ಸಿಡಿ ಸೌಲಭ್ಯ ಹೊಂದಿರುವ ಸಾಲಕ್ಕೆ ಬಡ್ಡಿದರ ವಿನಾಯಿತಿ ರು. 50 ಸಾವಿರದಿಂದ ರು.1 ಲಕ್ಷದ ವರೆಗೂ ಸಿಗಲಿದೆ. ಅರ್ಬನ್ ಹೌಸಿಂಗ್ ಮಿಷನ್ ದೇಶದ ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ಕಡಿಮೆ ದರದಲ್ಲಿ ಮನೆಗಳನ್ನು ನಿರ್ಮಿಸಲಿದೆ. ಈ ಸದ್ಯಕ್ಕೆ 1 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ 500 ನಗರಗಳನ್ನು ಕೇಂದ್ರೀಕರಿಸಿದೆ.

22 ಎಸ್‍ಇಜಡ್ ರದ್ದು: ವಿಶೇಷ ಆರ್ಥಿಕ ವಲಯ (ಎಸ್‍ಇಜಡ್) ಸ್ಥಾಪಿಸುವ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಗೆ ಕೇಂದ್ರ ಸರ್ಕಾರ ಮತ್ತಷ್ಟು ಕಾಲಾವಕಾಶ ನೀಡಿದೆ. ಸಂಪುಟ ಸಭೆಯಲ್ಲಿ 22 ಎಸ್ ಇಜಡ್‍ಗಳ ಪರವಾನಗಿ ರದ್ದುಗೊಳಿಸಿದ್ದು 27 ಎಸ್‍ಇಜಡ್‍ಗಳಿಗೆ ಮತ್ತಷ್ಟು ಸಮಯ ನೀಡಲು ನಿರ್ಧರಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ  ಮಂಡಳಿ, ಗಲ್ಫ್ ಆಯಿಲ್ ಕಾರ್ಪೊರೇಷನ್, ವೇದಾಂತ ಅಲ್ಯೂಮಿನಿಯಂ ಲಿಮಿಟೆಡ್, ಖಾಂಡ್ಲ ಫೋರ್ಟ್ ಟ್ರಸ್ಟ್, ನವಿ ಮುಂಬೈ ಎಸ್ ಇಜಡ್ ಪ್ರೈ.ಲಿಮಿಟೆಡ್ ಮತ್ತಷ್ಟು ಕಾಲಾವಕಾಶ ಪಡೆದ ಪ್ರಮುಖ ಎಸ್ ಇಜಡ್‍ಗಳಾಗಿವೆ. ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಬಹು ಉತ್ಪನ್ನ ಎಸ್‍ಇಜಡ್ ಅಭಿವೃದ್ಧಿಪಡಿಸುತ್ತಿತ್ತು. ಟ್ರೂ ಡೆವಲಪರ್ಸ್ ಐಟಿ ಎಸ್‍ಇಜಡ್ ನಿರ್ಮಿಸುವ ಯೋಜನೆ ಹೊಂದಿದ್ದರು. ಆದರೆ ನಿರ್ಮಾಣ ಸಮಾದಾನಕರವಾಗಿಲ್ಲ ಎಂದು
ರದ್ದುಗೊಳಿಸಲಾಗಿದೆ. ಪರವಾನಗಿ ರದ್ದುಪಡಿಸಿರುವ 22 ಎಸ್‍ಇಜಡ್‍ಗಳಲ್ಲಿ 19 ಐಟಿಗೆ ಸಂಬಂಧಿಸಿದ್ದರೆ, ಉಳಿದವು ಬಹು ಉತ್ಪನ್ನ, ಎಂಜಿನಿಯರಿಂಗ್, ಹಾರ್ಡ್‍ವೇರ್ ಮತ್ತು ಸಾಫ್ಟ್ ವೇರ್‍ಗೆ ಸಂಬಂಧಿಸಿದ್ದಾಗಿವೆ.


ಬತ್ತದ ಬೆಂಬಲ
ಬೆಲೆ ರು. 50 ಹೆಚ್ಚಳ ಪ್ರಸಕ್ತ ಮುಂಗಾರು ಹಂಗಾಮಿ ನಲ್ಲಿ ಕ್ವಿಂಟಲ್ ಬತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ರು.50 ಹೆಚ್ಚಿಸಿದ್ದು ರು.1,410 ಗಳಿಗೆ ನಿಗದಿಪಡಿಸಿದೆ. ಕೃಷಿ ವೆಚ್ಚ ಮತ್ತು ದರ ಆಯೋಗ (ಸಿಎಸಿಪಿ) ಶಿಫಾರಸಿನ ಮೇರೆಗೆ ಸಚಿವ ಸಂಪುಟ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಕಳೆದ ಸಾಲಿನಲ್ಲಿ ಈ ದರ ಸಾಮಾನ್ಯ ಬತ್ತಕ್ಕೆ ರು. 1,360 ಮತ್ತು `ಎ' ದರ್ಜೆ ಬತ್ತಕ್ಕೆ ರು.1,400 ನಿಗದಿಪಡಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com