ನಾನು ಸರ್ವಾಧಿಕಾರವನ್ನು ವಿರೋಧಿಸುತ್ತೇನೆ: ಆಡ್ವಾಣಿ
ನವದೆಹಲಿ: ``ನಾನು ಯಾವತ್ತೂ ಸರ್ವಾಧಿಕಾರದ ವಿರೋಧಿ. ಅಟಲ್ ಬಿಹಾರಿ ವಾಜಪೇಯಿ ಅವರು ಒಬ್ಬ ಅತ್ಯುನ್ನತ ನಾಯಕ. ಆದರೂ, ಒಂದು ವೇಳೆ `ಇಂದಿರಾ ಎಂದರೆ ಭಾರತ' ಅಂದಂತೆ, ಯಾರಾದರೂ `ವಾಜಪೇಯಿ ಅಂದರೆ ಭಾರತ' ಎಂದಿದ್ದರೆ ನಾನು ಖಂಡಿತಾ ಅದನ್ನು ಖಂಡಿಸುತ್ತಿದ್ದೆ. ಅಂತಹ ನಿರಂಕುಶ ವ್ಯವಸ್ಥೆಯನ್ನು ನಾನೆಂದೂ ಬಯಸುವುದಿಲ್ಲ''.
``ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಮರುಕಳಿಸಿದರೆ ಅಚ್ಚರಿಯಿಲ್ಲ'' ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆಡ್ವಾಣಿ ಅವರು, ಇದೀಗ ಮತ್ತೊಮ್ಮೆ ಅದೇ ರೀತಿಯ ವಿವಾದ ಸೃಷ್ಟಿಸಿದ್ದಾರೆ. ಈ ಬಾರಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದೇ ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಸಂದರ್ಶನದಲ್ಲಿ ಅಟಲ್‍ರನ್ನು ಕೊಂಡಾಡಿದ ಆಡ್ವಾಣಿ ಅವರು, ``ನೀವು ವಿನೀತರಾಗಿದ್ದರಷ್ಟೇ ದೇಶವನ್ನು ಆಳಬಹುದು. ಅಹಂಕಾರ ಮತ್ತು ದರ್ಪದಿಂದ ದೇಶ ಆಳಲು ಸಾಧ್ಯವಿಲ್ಲ.
ರಾಜಕೀಯ ಶಕ್ತಿ ಬಗ್ಗೆ ಯಾರಾದರೂ ಕಲಿಯಲಿಚ್ಛಿಸಿದರೆ, ಅಂಥವರಿಗೆ ವಾಜಪೇಯಿಗಿಂತ ಉತ್ತಮ ರೋಲ್ ಮಾಡೆಲ್ ಯಾರೂ ಇರಲಿಕ್ಕಿಲ್ಲ'' ಎಂದಿದ್ದಾರೆ. ಅಷ್ಟೇ ಅಲ್ಲ, ``ನಾನು
ಇದನ್ನು ಯಾವ ವ್ಯಕ್ತಿಯನ್ನು ಉದ್ದೇಶಿಸಿಯೂ ಹೇಳುತ್ತಿಲ್ಲ. ಅಧಿಕಾರವನ್ನು ಕಳೆದುಕೊಳ್ಳುವ ಭೀತಿ ಸರ್ವಾಧಿಕಾರದ ಮನಸ್ಥಿತಿಯನ್ನು ಹುಟ್ಟುಹಾಕುತ್ತದೆ. ಅದರ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು'' ಎಂದೂ ಹೇಳಿದ್ದಾರೆ.
ಜನ ಪಾಠ ಕಲಿಸಿದರು: ನಾನು ಇತ್ತೀಚೆಗೆ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಆಗ ನಾನು ಕಾಂಗ್ರೆಸನ್ನು ಉದ್ದೇಶಿಸಿಯೇ ಮಾತನಾಡಿದ್ದು. ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ನಿರ್ಮಿಸುವವರಿಗೆ ದೇಶದ ಜನ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಅನ್ನು
ಸೋಲಿಸುವ ಮೂಲಕ ಜನ ಪಾಠ ಕಲಿಸಿದರು. ಹಾಗಾಗಿ ಎಮರ್ಜೆನ್ಸಿ ಘೋಷಿಸುವ ಬಗ್ಗೆ ಯಾರಾದರೂ ಚಿಂತಿಸಿದ್ದರೆ ಅವರು ಈ ಬಗ್ಗೆ ಯೋಚಿಸುವುದೊಳಿತು ಎಂದೂ ಹೇಳಿದ್ದಾರೆ ಆಡ್ವಾಣಿ. ಜತೆಗೆ, ``ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್‍ಗೆ ನೀಡಿದ ಸಂದರ್ಶನದಲ್ಲಿ ನಾನು ತುರ್ತು ಪರಿಸ್ಥಿತಿ ಬಗ್ಗೆ ಹೇಳಿದ್ದು ಕಾಂಗ್ರೆಸ್ ಅನ್ನು ಉದ್ದೇಶಿಸಿಯೇ ಹೊರತು ಬೇರೆ ಯಾವ ವ್ಯಕ್ತಿಯನ್ನು ಉದ್ದೇಶಿಸಿಯೂ ಅಲ್ಲ'' ಎಂಬುದನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಜತೆಗೆ, ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದು ಅವರು ಮಾಡಿದ ಅತಿದೊಡ್ಡ ತಪ್ಪು. ಅಂದಿನ ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಕ್ಷಮೆ ಕೇಳಲೇಬೇಕು ಎಂದೂ ಆಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಆಡ್ವಾಣಿ ಹೇಳಿದ್ದೇನು?
- ಹಣ ಮತ್ತು ಅಧಿಕಾರ ಜನರನ್ನು ಹಾಳುಮಾಡುತ್ತದೆ. ಅಧಿಕಾರವನ್ನು ಕಳೆದುಕೊಳ್ಳುವ ಭಯವು ಜನರಿಗೆ ತಪ್ಪು ಮಾಡುವಂತೆ ಪ್ರೇರೇಪಿಸುತ್ತದೆ.
- ವಾಜಪೇಯಿಯವರಲ್ಲಿದ್ದ ವಿನಯತೆಯನ್ನು ಎಲ್ಲರೂ ಪಾಲಿಸಬೇಕು. ಅಹಂಕಾರದಿಂದ ದೇಶ ಆಳಲು ಸಾಧ್ಯವಿಲ್ಲ
- ಪಕ್ಷದೊಳಗಿನ ಸರ್ವಾಧಿಕಾರಿ ಧೋರಣೆಯನ್ನು ನಾನು ವಿರೋಧಿಸುತ್ತೇನೆ ಸಂಸದೀಯ ಪ್ರಜಾಪ್ರಭುತ್ವ ಜಾರಿ ಮಾಡಿದ್ದು ನೆಹರೂ ಅವರ ದೊಡ್ಡ ಸಾಧನೆ, ಚೀನಾದೊಂದಿಗೆ ಯುದ್ಧ ಸಾರಿದ್ದು ಅವರ ದೊಡ್ಡ ದೌರ್ಬಲ್ಯ
- ಪಾಕ್ ವಿರುದ್ಧ ಗೆದ್ದಿದ್ದು, ಬಾಂಗ್ಲಾ ರಚನೆಗೆ ನೆರವಾಗಿದ್ದು ಇಂದಿರಾರ ದೊಡ್ಡ ಸಾಧನೆಯಾದರೆ, ತುರ್ತು ಪರಿಸ್ಥಿತಿ ಘೋಷಿಸಿದ್ದು ಅವರ ಅತಿದೊಡ್ಡ ದೌರ್ಬಲ್ಯ
- ಭಾರತವು ಎಲ್ಲ ಅಡೆತಡೆಗಳ ನಡುವೆಯೂ ಯಶಸ್ವಿ ಸಂಸದೀಯ ಪ್ರಜಾಸತ್ತೆಯನ್ನು ಪಾಲಿಸಿಕೊಂಡು ಬಂದಿದೆ, ಮುಂದೆಯೂ ಇದರಲ್ಲಿ ಯಶ ಸಾಧಿಸಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ