
ನವದೆಹಲಿ: ದೇಶದ ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಅವರು ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರನ್ನು ಭೇಟಿಯಾಗಿದ್ದ ಪ್ರಕರಣ ವರದಿಯನ್ನು ಮಹಾರಾಷ್ಟ್ರ ಸರ್ಕಾರ ಭಾನುವಾರ ಪಡೆದಿದೆ.
2014 ರಲ್ಲಿ ಐಪಿಎಲ್ ಹಗರಣ ಪ್ರಮುಖ ಆರೋಪಿ ಲಲಿತ್ ಮೋದಿ ಅವರನ್ನು ಉನ್ನತಾಧಿಕಾರಿ ರಾಕೇಶ್ ಮರಿಯಾ ಅವರು ಭೇಟಿ ಮಾಡಿದ್ದರು. ಈ ಭೇಟಿಯ ದೃಶ್ಯಾವಳಿಗಳು ಕೆಲವು ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು. ಹೀಗಾಗಿ ಪೊಲೀಸ್ ಅಧಿಕಾರಿ ರಾಕೇಶ್ ಮರಿಯಾ ಅವರು ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರನ್ನು ಯಾವ ಕಾರಣಕ್ಕೆ ಭೇಟಿಯಾಗಿದ್ದರು, ಲಲಿತ್ ಮೋದಿ ಅವರಿಗೂ ರಾಕೇಶ್ ಮರಿಯಾ ಯಾವ ಸಂಬಂಧವಿದೆ ಎಂಬ ಕುರಿತಂತೆ ಪ್ರಶ್ನೆಗಳು ಉದ್ಭವಿಸಿದ್ದವಲ್ಲದೆ, ಹಲವು ಚರ್ಚೆಗಳಿಗೆ ಕಾರಣವಾಗಿತ್ತು.
ಹೀಗಾಗಿ ಪ್ರಕರಣ ಕುರಿತಂತೆ ನಿನ್ನೆ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದ ರಾಕೇಶ್ ಮರಿಯಾ ಅವರು, ನಾನು ಕಳೆದ ಜುಲೈನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲೆಂದು ಲಂಡನ್‍ಗೆ ತೆರಳಿದ್ದೆ. ಅಲ್ಲಿ ಲಲಿತ್‍ರನ್ನು ಭೇಟಿಯಾಗಿದ್ದು ನಿಜ. ಲಲಿತ್ ಮತ್ತು ಅವರ ವಕೀಲರು ನನ್ನನ್ನು ಸಂಪರ್ಕಿಸಿ, ಅವರ ಜೀವಕ್ಕೆ ಭೂಗತಲೋಕದಿಂದ ಬೆದರಿಕೆ ಇರುವ ಬಗ್ಗೆ ತಿಳಿಸಿದರು. ನಾನು ಅವರಿಗೆ ಮುಂಬೈಗೆ ಬಂದು ಅಧಿಕೃತ ದೂರು ದಾಖಲಿಸುವಂತೆ ಸೂಚಿಸಿದೆ. ನಂತರ ಭಾರತಕ್ಕೆ ವಾಪಸಾದ ಮೇಲೆ ನಾನು ಈ ವಿಚಾರದ ಬಗ್ಗೆ (ಲಲಿತ್ ರನ್ನು ಭೇಟಿಯಾದ) ರಹಸ್ಯ ವರದಿ ಸಿದ್ಧಪಡಿಸಿ ಡಿಜಿಪಿ ಹಾಗೂ ಗೃಹ ಇಲಾಖೆಗೆ ನೀಡಿದೆ'' ಎಂದು ಸ್ಪಷ್ಟನೆ ನೀಡಿದ್ದರು.
ವಿವಾದ ಕುರಿತಂತೆ ರಾಕೇಶ್ ಮರಿಯಾ ಮಾಧ್ಯಮಗಳಲ್ಲಿ ನೀಡಿದ್ದ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಮರಿಯಾ ಅವರಿಗೆ ಒಂದು ದಿನದ ಕಾಲವಾಶ ನೀಡಿದ್ದರು. ಮುಖ್ಯಮಂತ್ರಿ ನೀಡಿದ್ದ ಕಾಲವಕಾಶದಂತೆ ಇಂದು ರಾಕೇಶ್ ಮರಿಯಾ ಅವರು ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement