
ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಜಾರಿಯಾಗದು ಎಂದು ಹೇಳಲಾಗದು ಎಂಬ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ಹೇಳಿಕೆ ಸುಪ್ರೀಂ ಕೋರ್ಟ್ ನಲ್ಲೂ ಅನುರಣಿಸಿದೆ.
ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್.ಜೆ.ಎಸಿ)ಕ್ಕೆ ಸಂಬಂಧಿಸಿದಂತೆ ನಡೆದ ವಾದ-ಪ್ರತಿವಾದದ ವೇಳೆ ಸಂವಿಧಾನ ಪೀಠದ ನೇತೃತ್ವ ವಹಿಸಿರುವ ನ್ಯಾ.ಜೆ.ಎಸ್ ಖೆಹರ್ ಅವರು ಅಡ್ವಾಣಿ ಹೇಳಿಕೆಯನ್ನು ಪ್ರಸ್ತಾಪಿಸಿದ್ದಾರೆ.
ಎನ್.ಜೆ.ಎ.ಸಿಯನ್ನು ವಿರೋಧಿಸಿ ವಾದ ಮಂಡಿಸಿದ ಹಿರಿಯ ಸಂವಿಧಾನ ತಜ್ಞ ಹಾಗೂ ನ್ಯಾಯವಾದಿ ಫಾಲಿ ಎಸ್.ನಾರಿಮನ್ ಅವರು ಸ್ವಾತಂತ್ರ್ಯದ ಬಳಿಕ ಬಹುಮತ ಗಳಿಸಿದ ಕಾಂಗ್ರೆಸ್ ಸರ್ಕಾರ ಏನು ಮಾಡಿತೋ ಅದೇ ಮಾದರಿಯಲ್ಲಿ ಎನ್.ಜೆ.ಎ.ಸಿ ಕಾನೂನು ನ್ಯಾಯಾಂಗದ ಸ್ವಾತಂತ್ರ್ಯವನ್ನು ಹರಣ ಮಾಡಲಿದೆ. ಈಗ 30 ವರ್ಷಗಳ ಬಳಿಕ ಪೂರ್ಣ ಬಹುಮತವುಳ್ಳ ಸರ್ಕಾರ ಬಂದಿದ್ದು ಈ ಸರ್ಕಾರವೂ ಕಾಂಗ್ರೆಸ್ ನಂತೆಯೇ ಹೊಸ ಪ್ರಯೋಗ ಮಾಡಲು ಹೊರಟಿದೆ. ನ್ಯಾಯಾಧೀಶರು ತಮ್ಮ ಗುಲಾಮನಾಗಿರಬೇಕೆಂದು ಪ್ರತಿ ಸರ್ಕಾರವೂ ಬಯಸುತ್ತದೆ. ಇದು ಅತ್ಯಂತ ಅಪಾಯಕಾರಿ ಎಂದರು.
ತಕ್ಷಣ ಪ್ರತಿಕ್ರಿಯಿಸಿದ ನ್ಯಾ.ಖೆಹರ್, ತುರ್ತು ಪರಿಸ್ಥಿತಿ ಮತ್ತೆ ಜಾರಿಯಾದರೂ ಆಗಬಹುದು ಎಂದು ಹೇಳಲಾಗಿದೆಯಲ್ಲಾ ಎಂದು ವ್ಯಂಗ್ಯವಾಗಿ ನುಡಿದರು. ಈ ಮೂಲಕ ಅವರು ಅಡ್ವಾಣಿ ಹೇಳಿಕೆಯನ್ನು ನೆನಪಿಸಿಕೊಂಡರು.
Advertisement