
ನವದೆಹಲಿ: ರಾಜ್ಯಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಲು ಶೀಘ್ರ ಕ್ರಮ ವಹಿಸುವಂತೆ ಕರ್ನಾಟಕ ಸೇರಿ 9 ರಾಜ್ಯಗಳಿಗೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಹೇಳಿದೆ.
ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಕೇರಳ, ಉತ್ತರಾಖಂಡ್, ತೆಲಂಗಾಣ, ಉತ್ತರಪ್ರದೇಶ, ಜಾರ್ಖಂಡ್ ಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ ಅರುಣ್ ಝಾ, ಕಾಯ್ದೆ ಜಾರಿ ಮಾಡಲು ಕಾನೂನಿನಲ್ಲಿರುವ ಅವಕಾಶಗಳನ್ನು ನೋಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ಕಾಯ್ದೆ ಜಾರಿಗೆ ತರುವುದರಿಂದ ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಜನಾಂಗದವರಿಗೆ ಅನುಕೂಲವಾಗಲಿದ್ದು, ಅನುಷ್ಠಾನ ಶೀಘ್ರವಾಗಿ ಆಗಬೇಕೆಂದು ಬುಡಕಟ್ಟು ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅನುಷ್ಠಾನವಾದ ಕಾಯ್ದೆಯನ್ನು ನಿರ್ವಹಿಸಲು ವಿಶೇಷ ಘಟಕಗಳನ್ನೂ ರಚಿಸುವಂತೆ ಸೂಚಿಸಿದೆ.
ಈ ಕಾಯ್ದೆಯ ಅನುಷ್ಠಾನವನ್ನು ಆಂದೋಲನ ಮಾದರಿಯಲ್ಲಿ ಮಾಡಬೇಕು. ಜತೆಗೆ ಬುಡಕಟ್ಟು ಜನಾಂಗದವರಿಗೆ ಹಕ್ಕು ಸಿಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಚಿವಾಲಯಕ್ಕೆ ಸೂಚನೆ ನೀಡಿದ್ದರು. ಇನ್ನು ಕೆಲವೇ ತಿಂಗಳಲ್ಲಿ ಬುಡಕಟ್ಟು ಜನಾಂಗದವರು ಭೂಹಕ್ಕನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
Advertisement