53 ವರ್ಷಗಳ ನಂತರ ನತು ಲ ಮಾರ್ಗ ಸಂಚಾರಕ್ಕೆ ಮುಕ್ತ

53 ವರ್ಷಗಳ ನಂತರ ನತು ಲ ಮಾರ್ಗವನ್ನು ಈ ವರ್ಷ ಯಾತ್ರಿಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ...
ಭಾರತ-ಚೀನಾ ಗಡಿಯಲ್ಲಿರುವ ನತು ಲ ಪರ್ವತ ಪ್ರದೇಶ
ಭಾರತ-ಚೀನಾ ಗಡಿಯಲ್ಲಿರುವ ನತು ಲ ಪರ್ವತ ಪ್ರದೇಶ

ಗಾಂಗ್ ಟಾಕ್(ಸಿಕ್ಕಿಂ): ಕೈಲಾಸ ಮಾನಸರೋವರ ಯಾತ್ರೆ ಆರಂಭವಾಗಿದ್ದು, 53 ವರ್ಷಗಳ ನಂತರ ನತು ಲ ಮಾರ್ಗವನ್ನು ಈ ವರ್ಷ ಯಾತ್ರಿಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಚೀನಾದ ಭಾರತೀಯ ರಾಯಭಾರಿ ಲಿ ಯುಚೆಂಗ್ ಅವರು ಯಾತ್ರಿಗರ ಮೊದಲ ತಂಡವನ್ನು ನಾಳೆ ಬೆಳಗ್ಗೆ ಟಿಬೆಟ್ ನಲ್ಲಿ ಬರಮಾಡಿಕೊಂಡು ನತು ಲಾ ಮಾರ್ಗವನ್ನು ತೆರವುಗೊಳಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಮ್ಲಿಂಗ್ ಅವರನ್ನು ಭೇಟಿ ಮಾಡಿ ಮಾನಸ ಸರೋವರ ಯಾತ್ರೆಯ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು.

ಯುಚೆಂಗ್ ಅವರು, ನತು ಲಾ ಮಾರ್ಗದ ಮೂಲಕ ಟಿಬೆಟ್ ಗೆ ಇತರ ನಾಲ್ಕು ಮಂದಿ ಅಧಿಕಾರಿಗಳೊಂದಿಗೆ ತೆರಳಿದ್ದು, ನಾಳೆ ಬೆಳಗ್ಗೆ 39 ಯಾತ್ರಿಗರ ಮೊದಲ ತಂಡವನ್ನು ಬರಮಾಡಿಕೊಳ್ಳಲಿದ್ದಾರೆ. ತಂಡದಲ್ಲಿ  ಬಿಜೆಪಿ ಸಂಸದ ತರುಣ್ ವಿಜಯ್ ಮತ್ತು ಅವರ ಪತ್ನಿಯೂ ಇದ್ದಾರೆ.

ನತು ಲ ಹಿಮಾಲಯ ಪರ್ವತದಲ್ಲಿರುವ ಹಾದಿಯಾಗಿದ್ದು, ಇದು ಭಾರತದ ಸಿಕ್ಕಿಂ ರಾಜ್ಯ ಮತ್ತು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶವನ್ನು ಸಂಪರ್ಕಿಸುತ್ತದೆ. ಭಾರತ-ಚೀನಾ ಗಡಿಭಾಗವಾದ ನತು ಲ ಮಾರ್ಗವನ್ನು 1962ರಲ್ಲಿ ನಡೆದ ಭಾರತ-ಚೀನಾ ಯುದ್ಧದ ನಂತರ  ಮುಚ್ಚಲಾಗಿತ್ತು. ಇದೀಗ 53 ವರ್ಷಗಳ ಬಳಿಕ ಈ ಮಾರ್ಗವನ್ನು ಕೈಲಾಸ ಯಾತ್ರೆಗೆ ತೆರವುಗೊಳಿಸಲಾಗುತ್ತಿದೆ.

ಇದುವರೆಗೆ ಉತ್ತರಾಖಂಡ್ ನ ಲಿಪುಲೇಖ್ ಪಾಸ್ ಮೂಲಕ ಕೈಲಾಸ ಯಾತ್ರಿಗರು ಸಂಚರಿಸುತ್ತಿದ್ದರು. ನತು ಲ ಮಾರ್ಗವು ಲಿಪುಲೇಖ್ ಗೆ ಹೋಲಿಸಿದರೆ ಅಷ್ಟೊಂದು ಕ್ಲಿಷ್ಟಕರವಾಗಿಲ್ಲ. ಬಸ್ ಮೂಲಕ ಹೋಗಬಹುದಾಗಿದೆ. ಮೊದಲ ತಂಡದ ಮಾನಸರೋವರ ಪರಿಕ್ರಮ ಜೂನ್ 27ಕ್ಕೆ ಮುಕ್ತಾಯಗೊಳ್ಳಲಿದ್ದು, ಕೈಲಾಸ ಪರಿಕ್ರಮ ಜೂನ್ 28ಕ್ಕೆ ಮುಗಿದು ಜುಲೈ 3ಕ್ಕೆ ಭಾರತಕ್ಕೆ ವಾಪಾಸಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com