
ನವದೆಹಲಿ: ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಎಂಬುದು ಕರಾಳ ಸಮಯವಾಗಿತ್ತು, ಇಡೀ ದೇಶವೇ ಕತ್ತಲೆಯಲ್ಲಿ ಮುಳುಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ. ಸದ್ಯ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಶೋಭಾ ಓಜಾ ಹೇಳಿದ್ದಾರೆ.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸೂಟು ಬೂಟಿನ ಸರ್ಕಾರ 1975 ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನೇ ಮತ್ತೆ ಹೇರಿದೆ. ಬಿಜೆಪಿಯ ಹಿರಿಯ ನಾಯಕ ಎಲ್. ಕೆ ಅಡ್ವಾಣಿಗೆ ಎನ್ ಡಿ ಎ ಸರ್ಕಾರದ ನಾಯಕರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಅವರು ಮತ್ತೆ ತುರ್ತು ಪರಿಸ್ಥಿತಿ ಸಂದರ್ಭ ಬರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದರು ಎಂದು ಶೋಬಾ ಓಜಾ ಟೀಕಿಸಿದರು.
ಇನ್ನು ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೋಭಾ ತಪ್ಪಿತಸ್ಥರು ಹಾಗೂ ತಲೆಮರೆಸಿಕೊಂಡವರನ್ನು ರಕ್ಷಿಸಿ ಅವರನ್ನು ಕಾಪಾಡುವುದು ಬಿಜೆಪಿ ಮತ್ತೊಂದು ಮುಖ ಎಂದು ಆರೋಪಿಸಿದ ಅವರು ಲಲಿತ್ ಮೋದಿ ಪ್ರಕರಣದಲ್ಲಿ ಬಿಜೆಪಿ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ದೂರಿದರು.
Advertisement