ವಸುಂಧರಾ ರಾಜಿನಾಮೆ?

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ರಾಜೇ...
ಜೈರಾಮ್ ರಮೇಶ್
ಜೈರಾಮ್ ರಮೇಶ್

ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ರಾಜೇ ಮತ್ತು ಲಲಿತ್ ಮೋದಿ ನಡುವಿನ ದಾಖಲೆಗಳ ಸಂಬಂಧದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಹಿಂದೆ ಬಿಡುಗಡೆಗೊಂಡಿದ್ದ ದಾಖಲೆಗಳಲ್ಲಿ ನನ್ನ ಸಹಿಯೇ ಇಲ್ಲ, ಅವೆಲ್ಲವೂ ಸುಳ್ಳು ಎಂದಿದ್ದ ವಸುಂಧರಾ ರಾಜೇ ಅವರಿಗೆ ಈ ಮೂಲಕ ಹಿನ್ನಡೆಯಾಗಿದೆ.

ಲಲಿತ್ ಮೋದಿ ಬ್ರಿಟನ್‍ನಲ್ಲಿ ಉಳಿಯುವ ಸಲುವಾಗಿ ರಾಜೇ ಸಹಾಯ ಮಾಡಿರುವ ದಾಖಲೆಗಳೆಲ್ಲವನ್ನೂ ಜೈರಾಂ ರಮೇಶ್ ಮಾಧ್ಯಮಗಳಿಗೆ ನೀಡಿದ್ದಾರೆ. ಅಲ್ಲದೆ ಈ ಕೂಡಲೇ ವಸುಂಧರಾ ರಾಜೇ ರಾಜಿನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆಯೇ ಬಿಜೆಪಿ ಕೂಡ ಈ ಬಗ್ಗೆ ವಿವರಣೆ ನೀಡುವಂತೆ ವಸುಂಧರಾ ರಾಜೇ ಅವರಿಗೆ ಆದೇಶಿಸಿದೆ ಎಂದು ಖಾಸಗಿ ಪತ್ರಿಕೆಗಳು ವರದಿ ಮಾಡಿವೆ. ಅಲ್ಲದೆ ಇನ್ನು 24 ಗಂಟೆಗಳಲ್ಲಿ ವಿವರಣೆ ನೀಡ ಬೇಕು ಎಂದೂ ಸೂಚಿಸಿದೆ ಎಂದು ಹೇಳಲಾಗಿದೆ. ಹೀಗಾಗಿ ರಾಜೇ ಅವರ ಮೇಲೆ ಒತ್ತಡ ಹೆಚ್ಚುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ರಾಜಿನಾಮೆ ಕೊಡಬಹುದು ಎಂದು ಹೇಳಲಾಗುತ್ತಿದೆ.

ದಾಖಲೆ ಕೊಟ್ಟ ಜೈರಾಂ: ಲಲಿತ್ ಮೋದಿ ಅವರ ವಲಸೆ ಪತ್ರಗಳಿಗೆ ರಾಜೇ ಸಹಿಹಾಕಿರುವ ದಾಖಲೆಗಳನ್ನು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಬಿಡುಗಡೆ ಮಾಡಿದ್ದಾರೆ. ಈವರೆಗೆ ರಾಜೇ ಅವರು ದಾಖಲೆಪತ್ರಗಳಿಗೆ ಸಹಿ ಹಾಕಿಯೇ ಇಲ್ಲ ಎಂದು ರಾಜಸ್ಥಾನ ಬಿಜೆಪಿ ಮುಖಂಡರು ವಾದಿಸುತ್ತ ಬಂದಿದ್ದರು. ಆದರೆ, ಈಗ ಅವರ ಸಹಿ ಇರುವ ದಾಖಲೆಗಳು ಬಹಿರಂಗವಾಗಿರುವುದು ರಾಜೇ ಹಾಗೂ ಅವರ ಬೆಂಬಲಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 'ಮೋದಿ ವಲಸೆ ಅರ್ಜಿಗೆ ಬೆಂಬಲ ನೀಡುತ್ತಿದ್ದೇನೆ. ಆದರೆ, ಈ ವಿಚಾರ ಭಾರತೀಯ ಅಧಿಕಾರಿಗಳಿಗೆ ಗೊತ್ತಾಗಬಾರದು'' ಎಂದು ಷರತ್ತು ಹಾಕಿದ್ದರು.

ಪ್ರಧಾನಿ ಮೋದಿ, ಶಾಗೂ ಕಷ್ಟ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ರಾಷ್ಟ್ರಪತಿಗಳ ಭವನವನ್ನೂ ಈಗ ಸ್ವತಃ ಲಲಿತ್ ಮೋದಿ ಅವರೇ ವಿವಾದಕ್ಕೆ ಎಳೆತಂದಿದ್ದಾರೆ. ಈ ಕುರಿತು ಮಂಗಳವಾರ ರಾತ್ರಿ ಸರಣಿ ಟ್ವೀಟ್ ಮಾಡಿರುವ ಅವರು, ಮೋದಿ ಹಾಗೂ ಶಾಗೆ ಸಂಬಂಧಿಸಿದ ಕರೆ ವಿವರಗಳನ್ನೂ ತಮ್ಮ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದ್ದಾರೆ. ಹವಾಲಾ ಆಪರೇಟರ್ ವಿವೇಕ್ ನಾಗ್ಪಾಲ್ ಜತೆಗೆ ರಾಷ್ಟ್ರಪತಿಗಳ ಕಾರ್ಯದರ್ಶಿ ಒಮಿತಾ ಪೌಲ್ ಆತ್ಮೀಯ ಸಂಬಂಧ ಹೊಂದಿದ್ದಾರೆ. ಆದರೆ, ಅವರ ವಿರುದ್ಧ ಯಾಕೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮೋದಿ ಪ್ರಶ್ನಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಕಿಡಿ: ಫೆಮಾ ಉಲ್ಲಂಘನೆಗೆ ಸಂಬಂಧಿಸಿ ತಮ್ಮ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಹಾಗೂ ಐಟಿ ಅಧಿಕಾರಿಗಳ ವಿರುದ್ಧವೂ ಮೋದಿ ಹರಿಹಾಯ್ದಿದ್ದಾರೆ. ಆದಾಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತರೊಬ್ಬರು ಸ್ವಿಸ್ ಬ್ಯಾಂಕ್ ನ ಎಂಡಿಯಾಗಿರುವುದು ಗೊತ್ತಿದೆಯಾ? ಈ ವ್ಯಕ್ತಿಯ ಪತ್ನಿ ಇನ್ನೂ ತೆರಿಗೆ ಇಲಾಖೆಯಲ್ಲಿ ಅಕ್ರಮ ಆಸ್ತಿ ವಿಭಾಗದ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ ಮೋದಿ.

ಜೇಟ್ಲಿ ವಿರುದ್ಧ ಎಫ್ಐಆರ್ ಗೆ ಮನವಿ: ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರು ಈಗ ಮತ್ತೊಮ್ಮೆ ಬಿಜೆಪಿಗೆ ಸಂಕಷ್ಟ ತಂದಿಟ್ಟಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ದೆಹಲಿ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಪತ್ರಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com