ಐಸಿಸ್ ಲಿಸ್ಟಲ್ಲಿ ಟ್ಯುನೀಷಿಯಾವೇಕೆ?

ಮೂರು ಬೇರೆ ಬೇರೆ ಖಂಡಗಳಲ್ಲಿ ಒಂದೇ ದಿನ ದಾಳಿ... ಈ ದಾಳಿಗಳ ಮೊದಲ ಶಂಕಿತ ಸಂಘಟನೆಯೇ ಐಸಿಸ್. ಈ ಪೈಕಿ ಎರಡು ದಾಳಿಯ ಹೊಣೆಯನ್ನು ಅದೇ ಉಗ್ರ ಸಂಘಟನೆ ಹೊತ್ತುಕೊಂಡಿದೆ...
ಉಗ್ರರ ದಾಳಿಯಿಂದ ಗಾಯಗೊಂಡವರನ್ನು ರಕ್ಷಿಸುತ್ತಿರುವ ಭದ್ರತಾ ಸಿಬ್ಬಂದಿಗಳು
ಉಗ್ರರ ದಾಳಿಯಿಂದ ಗಾಯಗೊಂಡವರನ್ನು ರಕ್ಷಿಸುತ್ತಿರುವ ಭದ್ರತಾ ಸಿಬ್ಬಂದಿಗಳು
Updated on

ಟ್ಯುನಿಸ್: ಮೂರು ಬೇರೆ ಬೇರೆ ಖಂಡಗಳಲ್ಲಿ ಒಂದೇ ದಿನ ದಾಳಿ... ಈ ದಾಳಿಗಳ ಮೊದಲ ಶಂಕಿತ ಸಂಘಟನೆಯೇ ಐಸಿಸ್. ಈ ಪೈಕಿ ಎರಡು ದಾಳಿಯ ಹೊಣೆಯನ್ನು ಅದೇ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಒಟ್ಟಿನಲ್ಲಿ ಜಗತ್ತಿನಾದ್ಯಂತ ಐಸಿಸ್ ಉಗ್ರರು ಹುಟ್ಟಿಸುತ್ತಿರುವ ನಡುಕವು, ಭಯೋತ್ಪಾದನೆ ವಿರುದ್ಧ ವಿಶ್ವ ಸಾರಿರುವ ಸಮರ ಎಲ್ಲಿ ಸೋಲುತ್ತಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಜತೆಗೆ, ಇಸ್ಲಾಮಿಕ್ ಸ್ಟೇಟ್ ಉಗ್ರರು ಎಲ್ಲೆಡೆ ತಮ್ಮ ಕಂಬಂಧ ಬಾಹುಗಳನ್ನು ಚಾಚುತ್ತಿದ್ದು, ಶಾಂತಿಯ ಚಿಗುರುಗಳನ್ನು ಹೊಸಕಿ ಹಾಕುತ್ತಿದ್ದಾರೆ. ಟ್ಯುನೀಷಿಯಾದ ಬೀಚ್ ರೆಸಾರ್ಟ್‍ನಲ್ಲಿ ದಾಳಿ ನಡೆಸಿದ ಉಗ್ರರ ಉದ್ದೇಶವೇನಿತ್ತು, ಟ್ಯುನೀಷಿಯಾ ಅವರ ಟಾರ್ಗೆಟ್ ಆಗಿದ್ದೇಕೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಯಾರು ಗುರಿ? ಶಿಯಾಗಳು:
ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು. ವಿದೇಶಿ ಪ್ರವಾಸಿಗರು: ಹೋಟೆಲ್‍ಗಳು ಮತ್ತು ರಜಾಕಾಲದ ರೆಸಾರ್ಟ್‍ಗಳ ಮೇಲೆ ದಾಳಿ ನಡೆಸಿ ವಿದೇಶಿ ಪ್ರವಾಸಿಗರನ್ನು ಕೊಲ್ಲುವುದು. ವಿದೇಶಿಗರನ್ನು ಗುರಿಯಾಗಿಸಿಕೊಂಡರೆ ಅದು ಇಡೀ ಜಗತ್ತಿನ ಗಮನಸೆಳೆಯುತ್ತದೆ, ಉಗ್ರ ಸಂಘಟನೆಯ ಪ್ರಭಾವದ ಬಗ್ಗೆ ತಿಳಿಯುತ್ತದೆ ಮತ್ತು ಸ್ಥಳೀಯ ಪ್ರವಾಸೋದ್ಯಮಕ್ಕೆ ಪೆಟ್ಟುಬೀಳುತ್ತದೆ ಎನ್ನುವುದು ಉಗ್ರರ ವಾದ

ಟ್ಯುನೀಷಿಯಾ ಮೇಲೆ ಕಣ್ಣು:

2011ರ ಅರಬ್ ಕ್ರಾಂತಿಯ ಬಳಿಕ ಪ್ರಜಾಸತ್ತಾತ್ಮಕ ಪರಿವರ್ತನೆಯ ಮಾದರಿ ಎಂದೇ ಖ್ಯಾತಿ ಗಳಿಸಿರುವ ಟ್ಯುನೀಷಿಯಾವು ಅರಬ್ ಜಗತ್ತಲ್ಲೇ ಅತಿ ಹೆಚ್ಚು ಜಾತ್ಯತೀತ ರಾಷ್ಟ್ರ. ಇಲ್ಲಿನ ಜನ ಪಾಶ್ಚಿಮಾತ್ಯ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ.

ಮದ್ಯಸೇವನೆಗೂ ಮುಕ್ತರಾಗಿದ್ದಾರೆ. ನಾಗರಿಕರು ಇಸ್ಲಾಮಿನ ಪಥ ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೊರಳುತ್ತಿರುವುದು ಜಿಹಾದಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗ ಟ್ಯುನೀಷಿಯಾ ಮೇಲೆ ಐಸಿಸ್ ಕಣ್ಣಿಟ್ಟಿದೆ. ವಿಶೇಷವೆಂದರೆ, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಐಸಿಸ್ ಹೋರಾಟಕ್ಕೆ ಸಾಥ್ ನೀಡಿದವರಲ್ಲಿ ಹೆಚ್ಚಿನವರು ಟ್ಯುನೀಷಿಯಾ ಯುವಕರು.

ಸಂದೇಶ ಕಳುಹಿಸಿದ್ದ ಐಸಿಸ್:
ರಂಜಾನ್ ಮಾಸ ಆರಂಭವಾದಂದೇ ಐಸಿಸ್ ಕಳುಹಿಸಿದ ಸಂದೇಶ ಹೀಗಿತ್ತು: ಜಗತ್ತಿನಾದ್ಯಂತ ಮುಸ್ಲಿಮರಿಗೆ ಮಾಡಲಾದ ತೊಂದರೆಗೆ ಈ ತಿಂಗಳಲ್ಲೇ ಸೇಡು ತೀರಿಸಿಕೊಳ್ಳಿ. ಟ್ಯುನೀಷಿಯಾದಲ್ಲಿ `ಪಾತಿವ್ರತ್ಯ ಮತ್ತು ಹಿಜಾಬ್ ವಿರುದ್ಧ ಯುದ್ಧ ಶುರುವಾಗಿದೆ', ಅಲ್ಲಿ `ನಾಸ್ತಿಕತೆ, ವೇಶ್ಯಾವಾಟಿಕೆ ಮತ್ತು ವ್ಯಭಿಚಾರ' ತಾಂಡವವಾಡುತ್ತಿದೆ. ನಾವು ನಿಮ್ಮ ಜಿಹಾದ್ ಮೇಲೆ ನಂಬಿಕೆಯಿಟ್ಟಿದ್ದೇವೆ.

ನಿಮ್ಮವರು ಎಲ್ಲೆಲ್ಲೂ ಚಿತ್ರಹಿಂಸೆ ಅನುಭವಿ ಸುತ್ತಿದ್ದಾರೆ. ಅವರ ರಕ್ತ ಕುಡಿಯಲಾಗುತ್ತಿದೆ. ಕೈದಿಗಳು ಸಹಾಯಕ್ಕಾಗಿ ಅರಚಾಡುತ್ತಿದ್ದಾರೆ, ಮಕ್ಕಳು ಅನಾಥರಾಗಿದ್ದಾರೆ, ಮಕ್ಕಳ ಸಾವಿಗೆ ಅಮ್ಮಂದಿರು ಅಳುತ್ತಿದ್ದಾರೆ, ಮಸೀದಿಗಳನ್ನು ಉರುಳಿಸಲಾಗುತ್ತಿದೆ. ಭಾರತ, ಚೀನಾ, ಪ್ಯಾಲೆಸ್ತೀನ್, ಸೊಮಾಲಿಯಾ, ಅರೇಬಿಯನ್ ಪೆನಿನ್ಸುಲಾ, ಈಜಿಪ್ಟ್, ಇರಾಕ್, ಇಂಡೋನೇಷ್ಯಾ, ಆಫ್ಘನ್, ಪಾಕಿಸ್ತಾನ, ಲಿಬಿಯಾ... ಪೂರ್ವ ಮತ್ತು ಪಶ್ಚಿಮ ಎಲ್ಲೆಲ್ಲೂ ಮುಸ್ಲಿಮರ ಹಕ್ಕುಗಳನ್ನು ಕಸಿಯಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com