ಬಿಹಾರ: ಬಿಜೆಪಿಗೆ ಬಿಹಾರದ ಕುರಿತಂತೆ ಪ್ರಣಾಳಿಕೆಯಾಗಲೀ, ಮುಂದಾಲೋಚನೆಯಾಗಲಿ ಇಲ್ಲ ಹೀಗಾಗಿ ಬಿಜೆಪಿ ಎಂದಿಗೂ ಬಿಹಾರ ಚುನಾವಣೆಯನ್ನು ಅರ್ಧೈಸಲು ಸಾಧ್ಯವಿಲ್ಲ ಎಂದು ಬಿಜೆಪಿ ಕುರಿತಂತೆ ರಾಷ್ಟ್ರೀಯ ಜನತಾ ದಳ ಮಂಗಳವಾರ ವ್ಯಂಗ್ಯವಾಡಿದೆ.
ಈ ಕುರಿತಂತೆ ಮಾತನಾಡಿರುವ ಆರ್ ಜೆಡಿ ಪಕ್ಷದ ನಾಯಕ ಮನೋಜ್ ಜಾ ಅವರು, ಬಿಜೆಪಿ ಯಾವಾಗಲೂ ಋಣಾತ್ಮಕವಾದ ಪ್ರಚಾರ ಮಾಡಿಕೊಂಡು ಬಂದಿದ್ದು, ಈ ರೀತಿಯ ಪ್ರಚಾರ ಎಂದಿಗೂ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ. ಅಲ್ಲದೇ, ಬಿಜೆಪಿಗೆ ತನ್ನದೇ ಆದ ಪ್ರಣಾಳಿಕೆಯಾಗಲೀ, ಆಲೋಚನೆಗಳಾಗಲೀ ಇಲ್ಲವಾದ್ದರಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಂದಿಗೂ ಗೆಲವು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಯಲಿದೆ. ಹೀಗಾಗಿ ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ತನ್ನ ಮಿತ್ರ ಪಕ್ಷಗಳ ಜೊತೆಗೂಡಿ 40 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ದಾಖಲೆ ಮಟ್ಟದಲ್ಲಿ ಗೆಲವು ಸಾಧಿಸಿತ್ತು. ಇದೀಗ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಜೆಡಿ(ಯು) ಮತ್ತು ಆರ್ ಜೆಡಿ ಪಕ್ಷದ ವಿರುದ್ಧ ನಿಂತು ಗೆಲವು ಸಾಧಿಸಲು ಬಿಜೆಪಿ ಯೋಜನೆ ರೂಪಿಸುತ್ತಿರುವುದು ಇದೀಗ ರಾಜಕೀಯ ವಲಯದಲ್ಲಿ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
Advertisement