ಸೆಕ್ಷನ್ 377 ರದ್ದು ಹೇಳಿಕೆ ನೀಡಿಲ್ಲ: ಸದಾನಂದಗೌಡ

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಲಾಗಿದ್ದು, 377 ಸೆಕ್ಷನ್ ರದ್ದುಗೊಳಿಸುವ ಕುರಿತಂತೆ ಮಾತನಾಡಿಲ್ಲ ಎಂದು ಕಾನೂನು ಸಚಿವ ಸದಾನಂದ ಗೌಡ ಅವರು ಮಂಗಳವಾರ ಹೇಳಿದ್ದಾರೆ...
ಕಾನೂನು ಸಚಿವ ಡಿ.ವಿ.ಸದಾನಂದ ಗೌಡ
ಕಾನೂನು ಸಚಿವ ಡಿ.ವಿ.ಸದಾನಂದ ಗೌಡ

ನವದೆಹಲಿ: ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಲಾಗಿದ್ದು, 377 ಸೆಕ್ಷನ್ ರದ್ದುಗೊಳಿಸುವ ಕುರಿತಂತೆ ಮಾತನಾಡಿಲ್ಲ ಎಂದು ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಮಂಗಳವಾರ ಹೇಳಿದ್ದಾರೆ.

ಸೆಕ್ಷನ್ 377 ರದ್ದು ಮಾಡುವ ಹೇಳಿಕೆಗೆ ಸ್ಷಷ್ಟನೆ ನೀಡಿರುವ ಅವರು, ವಿದೇಶದಲ್ಲಿ ಸಲಿಂಗ ಕಾಮಕ್ಕೆ ಕಾನೂನು ಬದ್ಧಮಾಡಿರುವ ಕುರಿತಂತೆ ಪ್ರಶ್ನೆ ಕೇಳಲಾಯಿತು. ವಿದೇಶದಲ್ಲಿ ಒಪ್ಪಿಗೆಯಾಗಿರುವ ಸಲಿಂಗ ಕಾಮ ವಿವಾಹ ಕಾನೂನು ಭಾರತದಲ್ಲಿ ಒಪ್ಪಿಗೆಯಾಗುವುದು ಕಷ್ಟಕರವಾಗಿದ್ದು, ಈ ರೀತಿಯ ಕಾನೂನು ಜಾರಿಯನ್ನು ಜನರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ಜಾರಿ ತಂದಿದ್ದೇ ಆದರೆ ಹಲವು ಆಕ್ಷೇಪಗಳು ವ್ಯಕ್ತವಾಗುತ್ತದೆ. ಮೊದಲು ಈ ಕುರಿತಂತೆ ಚರ್ಚೆ ನಡೆಸಬೇಕಿದ್ದು, ಚರ್ಚೆಯಿಂದ ಉತ್ತಮ ಫಲಿತಾಂಶ ಬಂದಿದ್ದೇ ಆದರೆ ನಂತರ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದೇ ಹೊರತು, ಸೆಕ್ಷನ್ 377ನ್ನು ರದ್ದು ಗೊಳಿಸುವ ಪ್ರಸ್ತಾಪ ಮಾಡಿಲ್ಲ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಈ ಕುರಿತ ವಿಚಾರವಾಗಿ ರಾಜ್ಯಸಭೆಯಲ್ಲಿ ಚರ್ಚೆ ನಡೆಸುವ ಪ್ರಸ್ತಾಪದ ಕುರಿತಂತೆ ಮಾತನಾಡಿರುವ ಅವರು, ಸಲಿಂಗ ಕಾಮ ಕಾನೂನು ಬದ್ಧ ಕುರಿತಂತೆ ಶೀಘ್ರದಲ್ಲೇ ಚರ್ಚಾ ವೇದಿಕೆಯೊಂದನ್ನು ರಾಜ್ಯಸಭೆಯಲ್ಲಿ ನಿರ್ಮಿಸುವ ಚಿಂತನೆ ಇದ್ದು, ಶೀಘ್ರದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಕಾನೂನು ಸಚಿವರ ಈ ಹೇಳಿಕೆ ಕುರಿತಂತೆ ಮಾತನಾಡಿದ್ದ, ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು, ಸಲಿಂಗ ಕಾಮವನ್ನು ಅನುವಂಶಿಕ ರೋಗ ಎಂದು ಪರಿಗಣಿಸಿದ್ದು, ಎಂದಿಗೂ ಸಲಿಂಗ ಕಾಮವನ್ನು ಕಾನೂನು ಬದ್ಧ ಮಾಡುವ ಕುರಿತಂತೆ ಚಿಂತನೆ ನಡೆಸಿಯೇ ಇಲ್ಲ ಎಂದು ಹೇಳಿದ್ದರು.

ಅಮೆರಿಕದ ಸುಪ್ರೀಂಕೋರ್ಟ್ ಸಲಿಂಗಿಗಳ ಮದುವೆಯನ್ನು ಕಾನೂನು ಬದ್ಧಗೊಳಿಸಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸದಾನಂದಗೌಡ ಅವರು, ಶೀಘ್ರದಲ್ಲೇ ಪ್ರಸ್ತುತ ಜಾರಿಯಲ್ಲಿರುವ ಸೆಕ್ಷನ್ 377ನ್ನು ರದ್ದುಗೊಳಿಸಿ, ಅಸಹಜ ಲೈಂಗಿಕ ಕ್ರಿಯೆಯನ್ನು ಕ್ರಿಮಿನಲ್ ಅಪರಾಧದಿಂದ ಹೊರಗಿಡುವ ಸುಳಿವು ನೀಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಕಾನೂನು ಸಚಿವರ ಈ ಹೇಳಿಕೆಗೆ ಹಲವು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಸೆಕ್ಷನ್ 377ನ್ನು ರದ್ದುಗೊಳಿಸುವ ಹೇಳಿಕೆ ನೀಡಿಯೇ ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com