
ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಈ ಸಂಬಂಧ ಚರ್ಚಿಸಲು ಮಾರ್ಚ್ 4ರಂದು ಆಪ್ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರೆಯಲಾಗಿದೆ.
ಈ ಕುರಿತು ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಪ್ ವಕ್ತಾರ ಸಂಜಯ್ ಸಿಂಗ್, ಆಪ್ ಆಂತರಿಕ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟನೆ ನೀಡಿದರು. ಅಲ್ಲದೆ ಆಂತರಿಕ ಬಿಕ್ಕಟ್ಟಿನಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದರು.
ಇದೇ ವೇಳೆ ಪಕ್ಷದ ಮುಖಂಡರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರು ಅರವಿಂದ್ ಕೇಜ್ರಿವಾಲ್ ಅವರ ಪದಚ್ಯುತಿಗೆ ಯತ್ನಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ನೂತನ ರಾಷ್ಟ್ರೀಯ ಸಂಚಾಲಕರ ನೇಮಕದ ಬಗ್ಗೆಯೂ ಕಾರ್ಯಕಾರಣಿಯಲ್ಲಿ ಚರ್ಚಿಸಲಾಗುವುದು ಎಂದು ಸಂಜಯ್ ಸಿಂಗ್ ತಿಳಿಸಿದರು.
ಇತ್ತೀಗಷ್ಟೇ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಇಬ್ಬರೂ ಕೇಜ್ರಿವಾಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಎಎಪಿ 'ಒಬ್ಬ ವ್ಯಕ್ತಿಯ ಪಕ್ಷ'ವಾಗುತ್ತಿದೆ ಎಂದು ಭೂಷಣ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪ್ರಶಾಂತ್ ಭೂಷಣ್ ಮತ್ತು ಯಾದವ್ ಅವರು ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿಗೆ ಬರೆದ ಪತ್ರ ಗಳು ಬಹಿರಂಗವಾಗಿದ್ದು ಪತ್ರದಲ್ಲಿ ಪಕ್ಷದಲ್ಲಿ ಎಲ್ಲವೂ ಏಕಪಕ್ಷಿಯವಾಗಿ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.
Advertisement