ನಿರ್ಭಯಾ ಅತ್ಯಾಚಾರ ಸಾಕ್ಷ್ಯಚಿತ್ರ ಪ್ರಸಾರಕ್ಕೆ ದೆಹಲಿ ಹೈಕೋರ್ಟ್ ನಿಷೇಧ

ದೆಹಲಿ ಗ್ಯಾಂಗ್ ರೇಪ್ ಅಪರಾಧಿಯ ವಿವಾದಿತ ಸಂದರ್ಶನ ಒಳಗೊಂಡ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ತಡೆ ನೀಡಿದ್ದ ಕೇಂದ್ರ ಸರ್ಕಾರದ ಆದೇಶವನ್ನು ದೆಹಲಿ...
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್

ನವದೆಹಲಿ: ದೆಹಲಿ ಗ್ಯಾಂಗ್ ರೇಪ್ ಅಪರಾಧಿಯ ವಿವಾದಿತ ಸಂದರ್ಶನ ಒಳಗೊಂಡ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ತಡೆ ನೀಡಿದ್ದ ಕೇಂದ್ರ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ಮುಕೇಶ್ ಸಿಂಗ್‌ನ ಸಂದರ್ಶನದ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿನ್ನೆ ರಾತ್ರಿ ಆದೇಶಿಸಿತ್ತು. ಅಲ್ಲದೆ ಈ ಸಂಬಂಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಇಂದು ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಸಾಕ್ಷ್ಯಚಿತ್ರ ಪ್ರಸಾರಕ್ಕೆ ವಿಧಿಸಿದ್ದ ನಿಷೇಧವನ್ನು ಎತ್ತಿಹಿಡಿದಿದ್ದು, ಇಂಟರ್‌ನೆಟ್ ಸೇರಿದಂತೆ ಯಾವುದೇ ಚಾನೆಲ್‌ನಲ್ಲೂ ಕಾರ್ಯಕ್ರಮ ಪ್ರಸಾರವಾಗದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದೆ. ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ, ಯಾರಾದರೂ ಪ್ರಸಾರ ಮಾಡಿದರೆ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದೆ.

ದೆಹಲಿ ಗ್ಯಾಂಗ್ ರೇಪ್ ಅಪರಾಧಿಯ ಸಂದರ್ಶನ ವಿವಾದ ಬೆಳಗ್ಗೆ ಸಂಸತ್ತಿನಲ್ಲೂ ಪ್ರತಿಧ್ವನಿಸಿತ್ತು. ಈ ಬಗ್ಗೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಸಾಕ್ಷ್ಯ ಚಿತ್ರ ನಿರ್ಮಾಪಕರು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಪ್ರಸಾರ ತಡೆಯಲು ನ್ಯಾಯಾಲಯದಿಂದ ನಿನ್ನೆ ರಾತ್ರಿ ಅನುಮತಿ ದೊರೆತಿದ್ದು, ಯಾವುದೇ ಕಾರಣಕ್ಕೂ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಮುಕೇಶ್ ನೀಡಿದ್ದ ಸಂದರ್ಶನ ಮಾರ್ಚ್ 8ರಂದು ಪ್ರಮುಖ ಸುದ್ದಿ ವಾಹಿನಿ ಬಿಬಿಸಿಯಲ್ಲಿ ಬಿತ್ತರಗೊಳ್ಳಬೇಕಿತ್ತು. ಆದರೆ ಪ್ರಸಾರಕ್ಕೂ ಮೊದಲೇ ಸಂದರ್ಶನದ ಆಯ್ದ ಭಾಗ ಸೋರಿಕೆಯಾಗಿ, ವಿವಾದ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರ ಪ್ರಸಾರಕ್ಕೆ ನಿಷೇಧ ಹೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com