ಮಹಾರಾಷ್ಟ್ರ: ಮುಸ್ಲಿಂರಿಗೆ ನೀಡುತ್ತಿದ್ದ ಶೇ.5ರಷ್ಟು ಮೀಸಲಾತಿ ರದ್ದು!

ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗ, ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ...
ಮುಸ್ಲಿಂ
ಮುಸ್ಲಿಂ

ಮುಂಬೈ: ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗ, ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ.5ರಷ್ಟು ಮೀಸಲಾತಿಯನ್ನು ರದ್ದುಮಾಡಿದೆ.

ಕಳೆದ ರಾತ್ರಿ ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಏಕಾಏಕಿ ರದ್ದುಪಡಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಇದು ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸುವ ಸಾಧ್ಯತೆಯಿದ್ದು, ಸಂಸತ್ತಿನಲ್ಲಿ ಪ್ರತಿಧ್ವನಿಸುವ ಲಕ್ಷಣಗಳು ಗೋಚರಿಸಿವೆ.

ಕಾಂಗ್ರೆಸ್-ಎನ್‌ಸಿಪಿ ಸರ್ಕಾರ 2014 ಜುಲೈ 11ರಂದು ರಾಜ್ಯದಲ್ಲಿ ಹೊಸ ಕಾಯ್ದೆಯೊಂದನ್ನು ಜಾರಿ ಮಾಡಿತ್ತು. ಅದರಂತೆ ಮರಾಠವಾಡರಿಗೆ ಶೇ.16 ಹಾಗೂ ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿಯನ್ನು ಜಾರಿ ಮಾಡಿತ್ತು. ಈ ಕಾಯ್ದೆಯಂತೆ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಉದ್ಯೋಗಿಗಳು ಹಾಗೂ ಕಾಲೇಜುಗಳಲ್ಲಿ ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿ ಒದಗಿಸುವುದು ಈ ಕಾಯ್ದೆಯ ಉದ್ದೇಶವಾಗಿತ್ತು.

ವಿಶೇಷ ಹಿಂದುಳಿದ ಸಮುದಾಯದಲ್ಲಿರುವವರು ಈ ಮೀಸಲಾತಿ ಬಳಸಿಕೊಳ್ಳಲು ಅವಕಾಶವಿತ್ತು. ಆದರೆ, ಹಿಂದಿನ ಸರ್ಕಾರ ಜಾರಿ ಮಾಡಿದ್ದ ಕಾಯ್ದೆ ಮಹಾರಾಷ್ಟ್ರದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಬಿಜೆಪಿ, ಶಿವಸೇನೆ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮರಾಠರಿಗೆ ಮಾತ್ರ ಮೀಸಲಾತಿ ನೀಡಬೇಕು. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಈ ಮೀಸಲಾತಿ ಅಗತ್ಯವಿದೆ. ಮುಸ್ಲಿಮರಿಗೆ ನೀಡಬಾರದೆಂದು ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್‌ಗೆ ಒತ್ತಾಯಿಸಿದ್ದರು.  ಇದೀಗ ಹಿಂದಿನ ಸರ್ಕಾರದ ಕಾಯ್ದೆಯನ್ನು ರದ್ದುಪಡಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಾಯ್ದೆಯಲ್ಲಿ ಸಾಕಷ್ಟು ಲೋಪದೋಷಗಳಿರುವುದರಿಂದ ಮೀಸಲಾತಿಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಮುಂಬೈ ಹೈಕೋರ್ಟ್ ಸಮುದಾಯ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಮುಂದುವರಿಸಬೇಕೆಂಬ ಆದೇಶದ ಬಗ್ಗೆ ಸರ್ಕಾರ ಮನವರಿಕೆ ಮಾಡಿಕೊಡಲಿದೆ ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ. 2014 ಡಿಸೆಂಬರ್ 23ರ ಸುಗ್ರೀವಾಜ್ಞೆಯನ್ನು ನಮ್ಮ ಸರ್ಕಾರ ರದ್ದು ಮಾಡಲಿದೆ. ಯಾವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಇದನ್ನು ರದ್ದು ಮಾಡುತ್ತಿಲ್ಲ. ಎಲ್ಲರಿಗೂ ಸಂವಿಧಾನದ ಪ್ರಕಾರವೇ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳು ಸುಗ್ರೀವಾಜ್ಞೆ ರದ್ದುಪಡಿಸುತ್ತಿದ್ದಂತೆ ಮುಸ್ಲಿಂ ಮುಖಂಡರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com