
ಮಂಗಳೂರು: ಭಾರತದಲ್ಲಿ ವಾಸವಾಗಿದ್ದುಕೊಂಡು ಪಾಕಿಸ್ತಾನವನ್ನು ಹಾಡಿ ಹೊಗಳುವವರನ್ನು ಶೂ ನಿಂದ ಹೊಡೆಯಬೇಕು ಎಂದು ವಿಶ್ವ ಹಿಂದು ಪರಿಷತ್ ನಾಯಕಿ ಸಾಧ್ವಿ ಬಾಲಿಕಾ ಸರಸ್ವತಿ ಅವರು ಹೇಳಿರುವ ಮಾತುಗಳು ತೀವ್ರ ವಿವಾದವನ್ನು ಸೃಷ್ಟಿಸಿವೆ. ಈ ಹಿನ್ನಲೆಯಲ್ಲಿ ಪೊಲೀಸರು ಈಗ ಆಕೆಯ ವಿರುದ್ಧ ಕೇಸು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಕಳೆದ ಮಾರ್ಚ್ 1ರಂದು ಮಂಗಳೂರಿನಲ್ಲಿ ನಡೆದಿದ್ದ ಹಿಂದು ಸಮಾಜೋತ್ಸವದಲ್ಲಿ ಮಾತನಾಡಿದ್ದ ಮಧ್ಯಪ್ರದೇಶದ ಸಾಧ್ವಿ ಬಾಲಿಕಾ ಸರಸ್ವತಿ ಅವರು, ಭಾರತದಲ್ಲಿ ವಾಸವಾಗಿದ್ದುಕೊಂಡು ಪಾಕಿಸ್ಥಾನವನ್ನು ಹಾಡಿ ಹೊಗಳುವವರನ್ನು ಬೂಟಿನಿಂದ ಹೊಡೆಯಬೇಕಲ್ಲದೆ ಅವರನ್ನು ಪಾಕಿಸ್ತಾನಕ್ಕೆ ಅಟ್ಟಬೇಕು ಎಂದು ಅಪ್ಪಣೆ ಕೊಡಿಸಿದ್ದರು.
ಸಾಧ್ವಿ ಸರಸ್ವತಿ ಅವರ ಪ್ರಚೋದನಾಕಾರಿ ಭಾಷಣದ ಬಹು ಮುಖ್ಯ ವಿವಾದಾತ್ಮಕ ಭಾಗಗಳನ್ನು ನೋಟ್ ಮಾಡಿಕೊಂಡಿರುವ ಪೊಲೀಸರಿಗೆ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
ತಮ್ಮ ಭಾಷಣದಲ್ಲಿ ಹಿಂದುಗಳು ಎರಡು ರಾಮಮಂದಿರಗಳನ್ನು ನಿರ್ಮಿಸಲಿದ್ದಾರೆ. ಮೊದಲನೇಯದ್ದು ಅಯೋಧ್ಯೆಯಲ್ಲಿ; ಎರಡನೇಯದ್ದು ಇಸ್ಲಾಮಾಬಾದ್‌ನಲ್ಲಿ. ಇಸ್ಲಾಮಾಬಾದ್‌ನಲ್ಲಿ ರಾಮ ಮಂದಿರ ನಿರ್ಮಿಸಿದ ಬಳಿಕ ಭಾರತದಲ್ಲಿರುವ ಹಿಂದೂಗಳು ಅಲ್ಲಿಗೆ ಹೋಗಿ ಪೂಜೆ ಮತ್ತು ಅರ್ಚನೆಯನ್ನು ಕೈಗೊಳ್ಳಲಿದ್ದಾರೆ ಎಂದು ಸಾಧ್ವಿ ಹೇಳಿದ್ದರು.
ನಗರ ಪೊಲೀಸ್ ಕಮಿಷನರ್ ಎಸ್ ಮುರುಗನ್ ಹೇಳಿರುವಂತೆ ಸಾಧ್ವಿಯವರ ಭಾಷಣಕ್ಕೆ ಈ ತನಕ ಯಾರಿಂದಲೂ ದೂರು ಬಂದಿಲ್ಲ. ಆದರೆ ಒಂದೊಮ್ಮೆ ಆಕೆಯ ಭಾಷಣದ ವಿವಾದತ್ಮಾಕ ಅಂಶಗಳ ಬಗ್ಗೆ ಯಾರಾದರೂ ದೂರು ಕೊಟ್ಟಲ್ಲಿ ನಾವು ಆಕೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಆದರೆ ಈ ಬಗ್ಗೆ ಪೊಲೀಸರು ತಾವೇ ಸ್ವಯಂ ಪ್ರೇರಿತರಾಗಿ ಸಾಧ್ವಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೇ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಮುರುಗನ್ ಹೇಳಿದ್ದಾರೆ.
"ನಾವು ಇನ್ನಷ್ಟು ಕಾಲ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವಿನ್ನು ಕಣ್ಣಿಗೆ ಕಣ್ಣನ್ನು ಪಡೆದೇ ತೀರುತ್ತೇವೆ. ಭಾರತವು ಸ್ವಾತಂತ್ರ್ಯವನ್ನು ಶಾಂತಿಯಿಂದ ಪಡೆಯಿತೆನ್ನುವುದನ್ನು ಇತಿಹಾಸವು ನಮಗೆ ತಿಳಿಸುತ್ತದೆ. ಆದರೆ ನಾವು ಅದೇ ಸ್ವಾತಂತ್ರ್ಯವನ್ನು ಶಾಂತಿಯಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ. ನಾವು ಅಸ್ತ್ರವನ್ನು ಕೈಗೆತ್ತಿಕೊಳ್ಳಲೇಬೇಕಾಗುವುದು' ಎಂದು ಸಾಧ್ವಿ ಬಾಲಿಕಾ ಸರಸ್ವತಿ ಅವರು ಭಾಷಣದಲ್ಲಿ ಗುಡುಗಿದ್ದರು.
Advertisement