ನಿರ್ಭಯಾ ಸಾಕ್ಷ್ಯಚಿತ್ರ ಪ್ರಸಾರ ನೋವು ತಂದಿದೆ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು: ರಾಜನಾಥ್ ಸಿಂಗ್

ನಿಷೇಧದ ನಡುವೆಯೂ ನಿರ್ಭಯಾ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ಮುಕೇಶ್ ಸಿಂಗ್ ಸಂದರ್ಶನ ನಡೆಸಿದ್ದ ವಿವಾದಾತ್ಮಕ ಸಾಕ್ಷ್ಯ ಚಿತ್ರ ಪ್ರಸಾರ...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ನಿಷೇಧದ ನಡುವೆಯೂ ನಿರ್ಭಯಾ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ಮುಕೇಶ್ ಸಿಂಗ್ ಸಂದರ್ಶನ ನಡೆಸಿದ್ದ ವಿವಾದಾತ್ಮಕ ಸಾಕ್ಷ್ಯ ಚಿತ್ರ ಪ್ರಸಾರ ಮಾಡಿರುವ ಘಟನೆ ನೋವು ತಂದಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಈ ಬೆಳವಣಿಗೆಯಿಂದ ನನಗೆ ನೋವಾಗಿದೆ. 'ನಿರ್ಭಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ನಿಷೇಧ ಹೇರಲಾಗಿತ್ತು. ಆದರೂ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವ ಬಿಬಿಸಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ' ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಬಿಸಿ, ಇಂಗ್ಲೆಂಡ್‌ನಲ್ಲಿ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ನಿಷೇಧ ಇರಲಿಲ್ಲ. ಹೀಗಾಗಿ ತಾನು ಕಾರ್ಯಕ್ರಮ ಪ್ರಸಾರ ಮಾಡಿರುವುದಾಗಿ ಹೇಳಿದೆ.

ನಿಷೇಧದ ನಡುವೆಯೂ ಬಿಬಿಸಿ ಇಂದು ಬೆಳಗ್ಗೆ 'ಇಂಡಿಯಾಸ್ ಡಾಟರ್‌' ಎಂಬ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಇದು ಯೂಟ್ಯೂಬ್‌ನಲ್ಲೂ ಭಾರಿ ಸಂಚಲನ ಮೂಡಿಸಿತ್ತು.

ಈ ಸಾಕ್ಷ್ಯ­ಚಿತ್ರವನ್ನು ಮಹಿಳಾ ದಿನಾಚರಣೆಯಾದ ಮಾರ್ಚ್ 8ರಂದು ಪ್ರಸಾರ ಮಾಡಲು ನಿರ್ಧರಿಸಿತ್ತು. ಆದರೆ ಇದನ್ನು ಪ್ರಸಾರ ಮಾಡದಂತೆ ಭಾರತ ಸರ್ಕಾರ ಒತ್ತಡ ಹೇರಿದ ಹಿನ್ನಲೆಯಲ್ಲಿ, ಸರ್ಕಾರದ ಸೂಚನೆಗೆ ಮಣಿಯದ ಬಿಬಿಸಿ, ನಿಗದಿಗಿಂತ ಮೊದಲೇ ಪ್ರಸಾರ ಮಾಡಿದೆ.

ಈ ನಡುವೆ ಸಾಕ್ಷ್ಯ ಚಿತ್ರದ ನಿರ್ದೇಶಕಿ ಲೆಸ್ವಿ ಉಡ್ವಿನ್‌ ಬಂಧನದ ಭೀತಿಯಿಂದ ಇಂಗ್ಲೆಂಡ್ ಗೆ ತೆರಳಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com