
ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ ಗಾಲ್ಫ್ ಕೋರ್ಸ್ ನಲ್ಲಿ ಅಪಘಾತಕ್ಕೀಡಾದ ಹಾಲಿವುಡ್ ನಟ ಹ್ಯಾರಿಸನ್ ಫೋರ್ಡ್ ಅವರ ಸಹಾಯಕ್ಕೆ ಮೊದಲು ಬಂದಿದ್ದು ಭಾರತೀಯ ಮೂಲದ ವೈದ್ಯ. ಫೋರ್ಡ್ ಅವರ ವಿಮಾನ ಗಾಲ್ಫ್ ಕೋರ್ಸ್ ನ ಮರವೊಂದಕ್ಕೆ ಢಿಕ್ಕಿ ಹೊಡೆದಾಗ ಬೆನ್ನು ಮೂಳೆ ತಜ್ಞ ಸಂಜಯ್ ಖುರಾನ ಪೆನ್ಮಾರ್ ಗಾಲ್ಫ್ ಕೋರ್ಸ್ ನಲ್ಲಿದ್ದರು. "ಹಿಂದೆ ಕುಳಿತಿದ್ದ ಒಬ್ಬ ಪ್ರಯಾಣಿಕ ದೊಪ್ಪನೆ ಕುಸಿದು ಬಿದ್ದರು. ನನಗೆ ಇಂಧನ ವಾಸನೆ ಹತ್ತಿತ್ತು" ಎಂದು ಖುರಾನ ನೆನಪಿಸಿಕೊಳ್ಳುತ್ತಾರೆ.
ಖುರಾನ ಮತ್ತಿ ಇತರ ಗಾಲ್ಫ್ ಆಟಗಾರರು ವಿಮಾನದ ಅವಶೇಷಗಳಿಂದ ಫೋರ್ಡ್ ಅವರನ್ನು ಹೊರಗೆಳೆದಿದ್ದಲ್ಲದೆ, ವಿಮಾನದಿಂದ ಸೋರಿಕೆಯಾಗುತ್ತಿದ್ದ ಇಂಧನವನ್ನು ಕಂಡಿದ್ದಾರೆ. "ಅವರನ್ನು ಸುರಕ್ಷಿತವಾಗಿ ಹೊರಗೆ ಎಳೆದುಕೊಳ್ಳಬೇಕಿತ್ತು, ಇಂಧನ ಬೇರೆ ಸೋರುತ್ತಿದ್ದರಿಂದ ಇಂಧನ ಹೊತ್ತಿಕೊಳ್ಳದಿರದಂತೆ ಅದರ ಮೇಲೆ ಸ್ವಲ್ಪ ಮಣ್ಣು ಹಾಕಲು ಇತರರಿಗೆ ಸೂಚಿಸಿದೆ" ಎಂದಿದ್ದಾರೆ ಖುರಾನ.
ವಿಮಾನವನ್ನು ಓಡಿಸುವ ಆಸನದಲ್ಲಿದ್ದ ನಟನನ್ನು ಕಂದು ಆಶ್ಚರ್ಯಚಕಿತರಾದ ಖುರಾನ "ಅವರನ್ನು ಎಲ್ಲೋ ನೋಡಿದಂತಿತ್ತು, ಯಾರೋ ಪ್ರಸಿದ್ಧ ವ್ಯಕ್ತಿ. ಹಾ ಹೌದು ಅವರನ್ನು ನಾನು ಗುರುತು ಹಿಡಿದೆ" ಎನ್ನುತ್ತಾರೆ ಖುರಾನ.
ನಂತರ ಫೋರ್ಡ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಟಾರ್ ವಾರ್ಸ್ ಮತ್ತು ಇಂಡಿಯಾನಾ ಜೋನ್ಸ್ ನಲ್ಲಿ ಅವರ ನಟನೆಗೆ ಪ್ರಸಿದ್ಧವಾಗಿದ್ದ ನಟನಿಗೆ ಮೊದಲಿನಿಂದಲು ವಿಮಾನ ಹಾರಾಟದ ಹುಚ್ಚಿತ್ತು ಎನ್ನಲಾಗಿದೆ.
Advertisement