ಭಾರತ ಅತ್ಯಾಚಾರಿಗಳ ದೇಶ ಎಂದು ಭಾರತೀಯನಿಗೆ ಇಂಟರ್ನ್‍ಶಿಪ್ ನಿರಾಕರಣೆ

ಬಿಬಿಸಿ ಮೂಲಕ ಭಾರತದ ವಿರುದ್ಧ ಇಂಗ್ಲೆಂಡ್ ನಡೆಸಿದ ಲಾಬಿಯ ಮೊದಲ ದುಷ್ಪರಿಣಾಮ ಬೆಳಕಿಗೆ ಬಂದಿದೆ.
ಪ್ರೊ.ಅನೆಟ್
ಪ್ರೊ.ಅನೆಟ್

ಬರ್ಲಿನ್: ಬಿಬಿಸಿ ಮೂಲಕ ಭಾರತದ ವಿರುದ್ಧ ಇಂಗ್ಲೆಂಡ್ ನಡೆಸಿದ ಲಾಬಿಯ ಮೊದಲ ದುಷ್ಪರಿಣಾಮ ಬೆಳಕಿಗೆ ಬಂದಿದೆ. ನಿರ್ಭಯಾ ಪ್ರಕರಣದ ಆರೋಪಿಯ ಸಂದರ್ಶನವನ್ನೊಳಗೊಂಡ ಲೆಸ್ಲೀ ಉಡ್ವಿನ್‍ಳ ಸಾಕ್ಷ್ಯ ಚಿತ್ರ ಭಾರತವನ್ನು `ಅತ್ಯಾಚಾರಿಗಳ ದೇಶ'ವೆಂದು ಬಿಂಬಿಸುತ್ತದೆಂಬ ಶಂಕೆ ನಿಜವಾಗಿದೆ.

ಇದಕ್ಕೆ ಮೊದಲ ಉದಾಹರಣೆ ಇಲ್ಲಿದೆ. ಲೈಪ್ಜಿಗ್ ಯೂನಿವರ್ಸಿಟಿಯ ಪ್ರೊಫೆಸರ್ ಒಬ್ಬರು ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಸಮಸ್ಯೆಗಳ ಕಾರಣ ನೀಡಿ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಇಂಟರ್ನ್‍ಶಿಪ್‍ಗೆ ಅವಕಾಶ ನಿರಾಕರಿಸಿದ್ದಾರೆ. ವಿದ್ಯಾರ್ಥಿಯ ಗೆಳೆಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬಯೋಕೆಮೆಸ್ಟ್ರಿ ಮತ್ತು ಬಯೋ-ಅರ್ಗಾನಿಕ್ ಕೆಮೆಸ್ಟ್ರಿ ವಿಭಾಗದ ಪ್ರೊ. ಅನೆಟ್ ಜಿ. ಬೆಕ್ ಸಿಕಿಂಗರ್ ಕಳುಹಿಸಿದ್ದ ಎರಡು ಈ-ಮೇಲ್‍ಗಳ ಸ್ಕ್ರೀನ್ ಶಾಟ್‍ಗಳನ್ನು `ಕೋರ' ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಅಲ್ಲದೇ, ಪ್ರವೇಶ ನಿರಾಕರಣೆ ಬಗ್ಗೆ ವಿದ್ಯಾರ್ಥಿಯು ಪ್ರೊಫೆಸರ್ ಬಳಿ ಪ್ರಶ್ನಿಸಿದಾಗ, `ಹಲವಾರು ವರ್ಷಗಳಿಂದ ಹೆಚ್ಚುತ್ತಿರುವ ಅತ್ಯಾಚಾರ ಸಮಸ್ಯೆಯನ್ನು ತಡೆಗಟ್ಟುವಲ್ಲಿ ಭಾರತವು ವಿಫಲವಾಗಿರುವುದು ನಂಬಲರ್ಹ ಸಂಗತಿ' ಎಂದು ಉತ್ತರಿಸಿದ್ದಾರೆ.

`ಭಾರತದಲ್ಲಿನ ಅತ್ಯಾಚಾರ ಪ್ರಕರಣಗಳಿಗೆ ನನ್ನ ವಿರೋಧವಿದೆ. ನನ್ನ ಗ್ರೂಪ್ ನಲ್ಲಿ ಹಲವು ವಿದ್ಯಾರ್ಥಿನಿಯರಿರುವ ಕಾರಣ ನಾನು ಯಾವುದೇ ಭಾರತೀಯ ವಿದ್ಯಾರ್ಥಿಗೆ ಇಂಟರ್ನ್‍ಶಿಪ್‍ಗೆ ಅವಕಾಶ ನೀಡುವುದಿಲ್ಲ' ಇದು, ಪ್ರೊ. ಅನೆಟ್ ಜಿ. ಬೆಕ್ ಕಳುಹಿಸಿದ್ ಈ-ಮೇಲ್ ಸಾರಾಂಶ. ಈ ಬಗ್ಗೆ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಪ್ರೊ.ಅನೆಟ್, `ನನ್ನ ಈ-ಮೇಲ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ನನಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ಯಾವುದೇ ದ್ವೇಷವಿಲ್ಲ. ಈ ಮೊದಲು ಕೂಡ ನಾನು ಹಲವಾರು ವಿದ್ಯಾರ್ಥಿಗಳನ್ನು ಸ್ವೀಕರಿಸಿದ್ದೆ. ಪ್ರಸ್ತುತ ನನ್ನ ಲ್ಯಾಬ್ ತುಂಬಿರುವುದರಿಂದ ಭಾರತೀಯ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ್ದೇನಷ್ಟೇ' ಎಂದು ಹೇಳಿಕೆಯನ್ನು ತಿರುಚಿದ್ದಾರೆ.

ಏತನ್ಮಧ್ಯೆ, ಘಟನೆಗೆ ಪ್ರತಿಕ್ರಿಯಿಸಿರುವ ಜರ್ಮನ್ನ ಭಾರತದ ರಾಯಭಾರಿ ಮೈಕೆಲ್ ಸ್ಟೈನರ್, `ಭಾರತ ಅತ್ಯಾಚಾರಿಗಳ ನಾಡಲ್ಲ ಎಂದು ಪ್ರೊ. ಅನೆಟ್ ಜಿ. ಬೆಕ್ಗೆ ತಿಳಿಸಿದ್ದಾರೆ. `ನಿರ್ಭಯಾ' ಪ್ರಕರಣವೊಂದನ್ನೇ ಗಮನದಲ್ಲಿಟ್ಟುಕೊಂಡು, ಭಾರತೀಯ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿರುವ ನಿರ್ಧಾರ ಸರಿಯಲ್ಲ. ಭಾರತವು ಅತಿ ಹೆಚ್ಚು ಮುಕ್ತ ಮನಸ್ಸಿನ ವ್ಯಕ್ತಿಗಳನ್ನು ಹೊಂದಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವಂತೆ ಪ್ರೊಫೆಸರ್ ಗೆ ಬುದ್ಧಿಮಾತು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com