
ನವದೆಹಲಿ: ದಿನಕಳೆದಂತೆ ಪಿಡಿಪಿ ಜತೆಗಿನ ಮೈತ್ರಿ ಬಿಜೆಪಿಗೆ ಬಿಸಿ ತುಪ್ಪವಾಗುತ್ತಿದ್ದು, ಒಂದೆಡೆ ಪಿಡಿಪಿಯ ಕಿತಾಪತಿ, ಮತ್ತೊಂದೆಡೆ ಪ್ರತಿಪಕ್ಷಗಳ ಕಿರಿಕಿರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಚನೆಯಾದಾಗಿನಿಂದಲೂ ಮುಫ್ತಿ ಮೊಹಮ್ಮದ್ ಸಯೀದ್ ನೇತೃತ್ವದ ಪಿಡಿಪಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಸರ್ಕಾರ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮಸಾರತ್ ಆಲಂನನ್ನು ಬಿಡುಗಡೆ ಮಾಡಿರುವುದಂತೂ ಕೇಂದ್ರ ಸರ್ಕಾರವನ್ನು ತೀವ್ರ ಸಂದಿಗ್ಧಕ್ಕೆ ಸಿಲುಕಿಸಿದೆ. ಜಮ್ಮು ಮತ್ತು ಕಾಶ್ಮೀರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳ ಬಗ್ಗೆಯೂ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಸ್ಪಷ್ಟನೆ ಕೇಳುತ್ತಿವೆ.
ಏತನ್ಮಧ್ಯೆ, ಕಣಿವೆ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ನಡುವೆಯೇ ಇದರೊಳಗೆ ಮೂಗು ತೂರಿಸಲು ಪಾಕಿಸ್ತಾನ ಮುಂದಾಗಿದೆ. ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಾಸಿತ್ ಅವರು ಹುರಿಯತ್ ನಾಯಕ ಸೈಯ್ಯಲ್ ಅಲಿ ಶಾ ಗಿಲಾನಿಯನ್ನು ಭೇಟಿಯಾಗುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಪ್ರತ್ಯೇಕತಾವಾದಿಗಳ ಪರ
ಮುಫ್ತಿ ಮೊಹಮ್ಮದ್ ಸಯೀದ್ ಅವರು ಮೊದಲಿನಿಂದಲೂ ಪ್ರತ್ಯೇಕತಾವಾದಿಗಳು ಹಾಗೂ ಪಾಕಿಸ್ತಾನದ ಪರ ಎಂದೇ ಬಿಂಬಿತವಾಗಿದ್ದವರು. 1989ರಲ್ಲಿ ತಮ್ಮ ಮಗಳನ್ನು ಪ್ರತ್ಯೇಕತಾವಾದಿಗಳು ಅಪಹರಿಸಿದ್ದಾಗ ಕೇಂದ್ರ ಗೃಹ ಸಚಿವರಾಗಿದ್ದ ಸಯೀದ್, ಐವರು ಉಗ್ರರನ್ನು ಬಿಡುಗಡೆ ಮಾಡಿ ಮಗಳನ್ನು ಬಿಡಿಸಿಕೊಂಡಿದ್ದರು. ಅವರ ಪ್ರತಿಯೊಂದು ವರ್ತನೆಗಳು, ಹೇಳಿಕೆಗಳು, ಉಗ್ರರ ಪರ ಅವರಿಗಿರುವ ಮೃದು ಧೋರಣೆಯನ್ನು ಬಿಂಬಿಸುತ್ತಿವೆ. ಈಗ ಸರ್ಕಾರ ರಚನೆಯಾದ ಮೊದಲ ದಿನವೇ ಉಗ್ರರು ಹಾಗೂ ಪಾಕಿಸ್ತಾನಕ್ಕೆ ಥ್ಯಾಂಕ್ಸ್ ಹೇಳುವ ಮೂಲಕ ಮುಫ್ತಿ ಮತ್ತೆ ತಮ್ಮ ನಿಲುವನ್ನು ಪ್ರದರ್ಶಿಸಿದ್ದಾರೆ.
ಇಂತಹ ಪಿಡಿಪಿ ಜತೆ ಮಾಡಿಕೊಂಡ ಅನಿವಾರ್ಯ ಮೈತ್ರಿಗೆ ಬಿಜೆಪಿ ಈಗ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಆದ ಮೇಲೂ ಪಿಡಿಪಿ ಜತೆಗಿನ ಮೈತ್ರಿಯನ್ನು ಬಿಜೆಪಿ ಮುಂದುವರಿಸುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಸಂಸತ್ ಕೋಲಾಹಲ: ಪ್ರತ್ಯೇಕತಾವಾದಿ ನಾಯಕ ಆಲಂ ಬಿಡುಗಡೆ ವಿಚಾರ ಸಂಸತ್‍ನಲ್ಲೂ ಪ್ರತಿಧ್ವನಿಸಿದೆ. ಸೋಮವಾರ ಸಂಸತ್‍ನ ಎರಡೂ ಸದನಗಳಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಸಿವೆ.
ಪ್ರಧಾನಿ ಮೋದಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಒತ್ತಡಕ್ಕೆ ಮಣಿದ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಈ ಕುರಿತು ಮಾತನಾಡಿದ್ದಾರೆ. `ಉಗ್ರನ ಬಿಡುಗಡೆ ವಿಚಾರದಲ್ಲಿ ಕೇಂದ್ರವನ್ನು ಕತ್ತಲಲ್ಲಿ ಇಡಲಾಗಿತ್ತು' ಎಂದು ಅವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಗೃಹ ಸಚಿವ ರಾಜನಾಥ್‍ಸಿಂಗ್ ಮಾತನಾಡಿ, ಪಿಡಿಪಿ-ಬಿಜೆಪಿ ನಡುವೆ ಸೈದ್ಧಾಂತಿಕ ಭಿನ್ನಮತವಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇಷ್ಟಾದರೂ ಪಟ್ಟು ಬಿಡದ ಪ್ರತಿಪಕ್ಷಗಳು, ಆಲಂ ಬಿಡುಗಡೆಯು ರಾಷ್ಟ್ರ ವಿರೋಧಿ ಬೆಳವಣಿಗೆಯಾಗಿದ್ದು, ದೇಶದ ಸಮಗ್ರತೆಗೆ ಬಹಳ ಅಪಾಯಕಾರಿ. ಹಾಗಾಗಿ ಬಿಜೆಪಿ ಕೂಡಲೇ ಮುಫ್ತಿ ನೇತೃತ್ವದ ಸರ್ಕಾರದಿಂದ ಹೊರಬರಬೇಕು ಎಂದೂ ಒತ್ತಾಯಿಸಿದವು.
ದೇಶಭಕ್ತಿಯ ಪಾಠ ಬೇಡ
ಇದೇ ವೇಳೆ, ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರಧಾನಿ, `ನಮಗೆ ನಿಮ್ಮಿಂದ ದೇಶಭಕ್ತಿಯ ಪಾಠ ಬೇಕಾಗಿಲ್ಲ' ಎಂದು ನುಡಿದರು.
ಜಮ್ಮು-ಕಾಶ್ಮೀರದಲ್ಲಿ ಏನು ನಡೆಯುತ್ತಿದೆಯೋ ಅದರ ಬಗ್ಗೆ ಯಾರೂ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿಯೂ ಇಲ್ಲ, ಮಾಹಿತಿ ನೀಡಿಯೂ ಇಲ್ಲ. ದೇಶದ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಯಾವ ಕಾರಣಕ್ಕೂ ಯಾರಿಗೂ ಅವಕಾಶ ನೀಡುವುದಿಲ್ಲ.
-ನರೇಂದ್ರ ಮೋದಿ, ಪ್ರಧಾನಿ
ನಮಗೂ ಆಕ್ರೋಶವಿದೆ
ಪ್ರತಿಪಕ್ಷಗಳ ಗಲಾಟೆ ತೀವ್ರವಾಗುತ್ತಿದ್ದಂತೆ ಎದ್ದುನಿಂತ ಪ್ರಧಾನಿ ಮೋದಿ, ಜಮ್ಮು, ಕಾಶ್ಮೀರದ ಬೆಳವಣಿಗೆ ಬಗ್ಗೆ ಇಡೀ ದೇಶಕ್ಕೆ ಹಾಗೂ ಸದನಕ್ಕೆ ಎಷ್ಟು ಆಕ್ರೋಶ ಇದೆಯೋ, ನಮ್ಮಲ್ಲೂ ಅಷ್ಟೇ ಆಕ್ರೋಶವಿದೆ. ಇಂತಹ ಕ್ರಮವನ್ನು ಸಂಸತ್ ಒಕ್ಕೊರಲಿನಿಂದ ಖಂಡಿಸುತ್ತದೆ. ಒಂದು ವಿಷಯ ಮಾತ್ರ ಸತ್ಯ, ಅಲ್ಲಿ ಏನು ನಡೆಯುತ್ತಿದೆಯೋ ಆ
ಬಗ್ಗೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿಯೂ ಇಲ್ಲ, ಮಾಹಿತಿ ನೀಡಿಯೂ ಇಲ್ಲ ಎಂದು ಹೇಳಿದರು. ಜತೆಗೆ, `ದೇಶದ ಸಮಗ್ರತೆಯೊದಿಗೆ ರಾಜಿ ಮಾಡಿಕೊಳ್ಳಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ.ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ ಸ್ಪಷ್ಟನೆ ಕೇಳಲಾಗಿದೆ. ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದರು.
ಭಿನ್ನಾಭಿಪ್ರಾಯ ನಿಜ
`ಬಿಜೆಪಿ ಮತ್ತು ಪಿಡಿಪಿ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿರುವುದು ನಿಜ' ಎಂದು ಕೇಂದ್ರ ಒಪ್ಪಿಕೊಂಡಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, `ಎಷ್ಟೇ ಪ್ರಭಾವಿಗಳಾ ದರೂ ಸರಿ, ದೇಶದ ಭದ್ರತೆ, ಏಕತೆ ಮತ್ತು ಸಮಗ್ರತೆಯೊಂದಿಗೆ ಆಟವಾಡಲು ಬಿಡುವುದಿಲ್ಲ' ಎಂದು ರಾಜ್ಯಸಭೆಯಲ್ಲಿ ಸೋಮವಾರ ಹೇಳಿದ್ದಾರೆ. ಸರ್ಕಾರ ರಚನೆ ಸಂಬಂಧ
ಯಾವುದೇ ಹಿಡನ್ ಅಜೆಂಡಾ, ರಹಸ್ಯ ಮಾತುಕತೆ ಇಲ್ಲ. ನಂಬಿಕೆದ್ರೋಹಿಗಳೊಂದಿಗೆ ಸಂಧಾನವೂ ಅಸಾಧ್ಯ ಎಂದಿದ್ದಾರೆ.
ಗಿಲಾನಿ ಭೇಟಿ
ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಹುರಿಯತ್ ನಾಯಕ ಗಿಲಾನಿ ನಿವಾಸಕ್ಕೆ ತೆರಳಿದ ಭಾರತದಲ್ಲಿನ ಪಾಕಿಸ್ತಾನ ರಾಯಭಾರಿಬಾಸಿತ್ 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಜೈಶಂಕರ್ ಭೇಟಿ, ಆಲಂ ಬಿಡುಗಡೆ ಸೇರಿ ಹಲವು ವಿಚಾರಗಳ ಬಗ್ಗೆ ಇವರಿಬ್ಬರೂ ಚರ್ಚಿಸಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಇದೇ ಕಾರಣಕ್ಕೆ (ಪ್ರತ್ಯೇಕತಾವಾದಿ ನಾಯಕರ ಭೇಟಿ)
ಭಾರತ ಸರ್ಕಾರ ಉಭಯ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದು ಮಾಡಿತ್ತು.
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಪ್ರತಿಯೊಂದು ವಿಷಯವನ್ನೂ ಪ್ರಧಾನಿ ಕಾರ್ಯಾಲಯಕ್ಕೆ ತಿಳಿಸಬೇಕಾದ ಅಗತ್ಯವಿಲ್ಲ.
-ಪಿಡಿಪಿ ಮೂಲಗಳು
Advertisement