
ನವದೆಹಲಿ: ಭ್ರಷ್ಟಾಚಾರ ಮತ್ತು ತೈಲ ಕಲಬೆರಕೆ ಪೆಟ್ರೋಲ್ ಜಾಲ ಪತ್ತೆ ಹಚ್ಚಿ ಗುಂಡೇಟಿಗೆ ಬಲಿಯಾಗಿದ್ದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮ್ಯಾನೇಜರ್ ಎಸ್ ಮಂಜುನಾಥ್ ಪ್ರಕರಣಕ್ಕೆ ಸಂಬಂಧಿಸಿಂದಂತೆ ಆರು ಆರೋಪಿಗಳಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ತೈಲಕಲಬೆರಕೆ ಜಾಲವನ್ನು ಪತ್ತೆ ಹಚ್ಚಿದ್ದ ಕೋಲಾರ ಮೂಲದ ಎಸ್. ಮಂಜುನಾಥ್ ಅವರು ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರನ್ನು ನವೆಂಬರ್ 19, 2005ರಂದು ಉತ್ತರ ಪ್ರದೇಶದ ಲಕ್ಷ್ಮೀಪುರದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ಪ್ರಕರಣ ಸಂಬಂಧ ಅಲಹಾಬಾದ್ ಹೈಕೋರ್ಟ್ ಆರು ಆರೋಪಿಗಳಿಗೆ ಜೀವವಾಧಿ ಶಿಕ್ಷೆ ನೀಡಿ, ಇಬ್ಬರನ್ನು ಕೈಬಿಡಲಾಗಿತ್ತು. ಇದನ್ನು ಪ್ರಶ್ನಿಸಿ ಆರು ಆರೋಪಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದು, ಆರು ಆರೋಪಿಗಳಿಗೆ ಜೀವವಾಧಿ ಶಿಕ್ಷೆ ವಿಧಿಸಿದೆ.
ಪವನ್ ಕುಮಾರ್ ಅಲಿಯಾಸ್ ಮೋನು ಮಿತ್ತಲ್, ದೇವೇಶ್ ಅಗ್ನಿ ಹೋತ್ರಿ, ರಾಜೇಶ್ ಶರ್ಮಾ, ರಾಕೇಶ್ ಆನಂದ, ವಿವೇಕ್ ಶರ್ಮಾ ಹಾಗೂ ಶ್ರಿವೇಶ್ ಗಿರಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಪ್ರಕರಣ ಹಿನ್ನಲೆ
ಐಒಸಿಯಲ್ಲಿ ಮ್ಯಾನೇಜರ್ ಆಗಿದ್ದ ಮಂಜುನಾಥ್ ತೈಲ ಕಲಬೆರಕೆ ದಂಧೆಯ ಬೆನ್ನು ಹತ್ತಿ ಹೋಗಿದ್ದರು. ದಂಧೆಯನ್ನು ಬಯಲು ಮಾಡಿದ್ದಲ್ಲದೇ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರ ಹೆಸರನ್ನು ಸಹ ಬಹಿರಂಗ ಪಡಿಸಿದ್ದರು.
ಇದರ ಬಗ್ಗೆ ಮತ್ತಷ್ಟು ತಿಳಿಯಲು ಹಾಗೂ ತೈಲಗಳ ಸ್ಯಾಂಪಲ್ ಸಂಗ್ರಹಿಸಲು ಮಂಜುನಾಥ್ ನವೆಂಬರ್ 19, 2005ರಂದು ಉತ್ತರ ಪ್ರದೇಶದಲ್ಲಿರುವ ಲಕ್ಷ್ಮೀಪುರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮೋನು ಮಿತ್ತಲ್ ಅವರಿಗೆ ಸೇರ್ಪಟ್ಟ ಪೆಟ್ರೋಲ್ ಬಂಕ್ ನಲ್ಲಿ ಸ್ಯಾಂಪಲ್ ಸಂಗ್ರಹಿಸಲು ಮುಂದಾಗಿದ್ದರು, ಈ ವೇಳೆ ಮಂಜುನಾಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದರು, ನಾಲ್ಕು ವರ್ಷಗಳ ಹೋರಾಟದ ನಂತರ ಅಲಹಾಬಾದ್ ಹೈಕೋರ್ಟ್ 2009ರಲ್ಲಿ ಆರೋಪಿಗಳಿಗೆ ಜೀವವಾಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಅಪರಾಧಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
Advertisement