
ನವದೆಹಲಿ: ರೇಪ್ ನಮ್ಮಲ್ಲಷ್ಟೇ ಆಗೋದಾ? ಬಿಬಿಸಿ ವರದಿಗಾರ್ತಿ ಭಾರತದ ಮರ್ಯಾದೆಯನ್ನು ಅಷ್ಟರ ಮಟ್ಟಿಗೆ ಕಳೆಯಬಹುದಿತ್ತಾ? ಇಂಥ ಪ್ರಶ್ನೆಗಳನ್ನಿಟ್ಟುಕೊಂಡು ಭಾರತೀಯ ಮೂಲದ ಹರ್ವಿಂದರ್ ಸಿಂಗ್ `ಯುನೈಟೆಡ್ ಕಿಂಗ್‍ಡಮ್ ಡಾಟರ್ಸ್' ಎಂಬ ಸಾಕ್ಷ್ಯಚಿತ್ರ ರಚಿಸಿದ್ದಾರೆ. ಇದು ಪಕ್ಕಾ ಇಂಡಿಯಾಸ್ ಡಾಟರ್ಸ್ ಗೆ ವಿರುದ್ಧವಾದ, ರೇಪ್ ಬೇರೆ ಕಡೆಯೂ ನಡೆಯುತ್ತೆ ಎಂದು ತೋರುವ ಸಾಕ್ಷ್ಯಚಿತ್ರ. ಅತ್ಯಾಚಾರ ಪ್ರಕರಣಗಳು ಇಂಗ್ಲೆಂಡ್ನಲ್ಲೂ ನಡೆಯುತ್ತವೆ, ಅಲ್ಲಿನ ಹೆಣ್ಣು ಮಕ್ಕಳಿಗೆ ಹೋಲಿಕೆ ಮಾಡಿದರೆ ಭಾರತದ ಹೆಣ್ಣು ಮಕ್ಕಳೇ ಸೇಫ್ ಎಂಬರ್ಥದಲ್ಲಿ ಈ ಸಾಕ್ಷ್ಯಚಿತ್ರ ತಯಾರಿಸಲಾಗಿದೆ.
ಇಂಗ್ಲೆಂಡ್‍ನಲ್ಲಿ ಪ್ರತಿದಿನ 250 ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಅತ್ಯಾಚಾರಕ್ಕೆ ಗಂಡಿಗಿಂತ ಹೆಣ್ಣೇ ಹೆಚ್ಚು ಕಾರಣ ಎಂದು `ಇಂಡಿಯಾಸ್ ಡಾಟರ್'ನಲ್ಲಿ ಮುಕೇಶ್ ಸಿಂಗ್ ಹೇಳಿದ್ದ. ವಿಚಿತ್ರವೆಂದರೆ ಇಂಗ್ಲೆಂಡ್‍ನ ಮಹಾನ್ ಪುರುಷರೂ ಅತ್ಯಾಚಾರಕ್ಕೆ ಗಂಡಿಗಿಂತ ಹೆಣ್ಣೇ ಕಾರಣ ಎಂದಿದ್ದಾರೆ. ಮೂರನೇ ಒಂದು ಭಾಗದಷ್ಟು ಇಂಗ್ಲೆಂಡ್ ಪ್ರಜೆಗಳು ಈ ಅಬಿsಪ್ರಾಯವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್‍ನಲ್ಲಿ ಮಹಿಳೆ ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸದ ಕಾರಣ ಅಲ್ಲಿ ಮಹಿಳೆಯರ ಕೊಲೆಗಳು ನಡೆಯಲ್ಲ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. ಅತ್ಯಾಚಾರಕ್ಕೆ ಮಹಿಳೆ ಸಹಕರಿಸಿದ್ದರೆ ಆಕೆಯನ್ನು ಸಾಯಿಸದೆ ಬಿಡುತ್ತಿದ್ದೆವು ಎಂದು ಮಕೇಶ್ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. ಇನ್ನು, ಅತ್ಯಾಚಾರಿಗಳಿಗೆ ಶಿಕ್ಷೆಯನ್ನು ಗಮನಿಸಿದರೆ ಭಾರತದಂತೆ ಇಂಗ್ಲೆಂಡ್‍ನಲ್ಲೂ ಕೂಡ ಬೆಳಕಿಗೆ ಬರುವ ಪ್ರಕರಣಗಳು ಕಡಿಮೆ. ಭಾರತದಂತೆ ಇಂಗ್ಲೆಂಡ್‍ನ ಎಲ್ಲಾ ಸಂತ್ರಸ್ತ ಮಹಿಳೆಯರಿಗೂ ನ್ಯಾಯ ಸಿಗುವುದಿಲ್ಲ. ಶೇ.10ರಷ್ಟು ಅತ್ಯಾಚಾರಿಗಳಿಗೆ ಮಾತ್ರ ಶಿಕ್ಷೆಯಾಗುತ್ತದೆ ಎಂದು ಸಾಕ್ಷ್ಯಚಿತ್ರ ತಿಳಿಸಿದೆ.
ಹರ್ವಿಂದರ್ ಸಿಂಗ್ `ಯುನೈಟೆಡ್ ಕಿಂಗ್‍ಡಮ್ಸ್ ಡಾಟರ್ಸ್' ಸಾಕ್ಷ್ಯಚಿತ್ರದ ಮೂಲಕ ಅತ್ಯಾಚಾರ ವಿಶ್ವದಲ್ಲೆಡೆ ನಡೆಯುವ ಅಪರಾಧವಾಗಿದ್ದು, ಎಲ್ಲಾ ಅತ್ಯಾಚಾರಿಗಳ ಮನಸ್ಥಿತಿ ಹಾಗೂ ಅಪರಾಧ ಒಂದೇ ಎಂದು ತಿಳಿಸಿದ್ದಾರೆ. ಇಂಡಿಯಾಸ್ ಡಾಟರ್‍ನಲ್ಲಿ ಭಾರತವನ್ನು ರೇಪಿಸ್ಟ್‍ಗಳ ದೇಶ ಎಂದು ಬಿಂಬಿಸಿರುವ ಲೆಸ್ಲಿ ಉಡ್ವಿನ್ ಅವರಿಗೆ ಹರ್ವಿಂದರ್ ಸಿಂಗ್ ಸಾಕ್ಷ್ಯಚಿತ್ರದ ಮೂಲಕವೇ ಉತ್ತರ ನೀಡಿದ್ದಾರೆ. ಇದೇ ವೇಳೆ, `ಇಂಡಿಯಾಸ್ ಡಾಟರ್' ಮೇಲೆ ಹೇರಲಾಗಿದ್ದ ನಿಷೇಧವನ್ನು ದೆಹಲಿ ಹೈಕೋರ್ಟ್ ಮುಂದುವರಿಸಿದೆ.
ಭಾರತವೇ ಸೇಫ್
ಹೆಣ್ಣು ಮಕ್ಕಳ ಓಡಾಟಕ್ಕೆ ಭಾರತವೇ ಬೆಸ್ಟ್ ಅಂತೆ. ಹೀಗಂತ ಒಂದು ಸಮೀಕ್ಷೆ ಹೇಳಿದೆ. ಹಾಲಿಡೇ ಐಕ್ಯೂ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿತ್ತು. 18ರಿಂದ 24 ವರ್ಷದೊಳಗಿನ ಶೇ.94ರಷ್ಟು ಮಹಿಳೆಯರು ಭಾರತವೇ ಸೇಫ್ ಎಂದು ಹೇಳಿದ್ದಾರೆ.
25-34ರೊಳಗಿನ ಮಹಿಳೆಯರು ಶೇ.92, 35-44 ವಯಸ್ಸಿನೊಳಗಿನ ಮಹಿಳೆಯರು ಶೇ.79, 45-54 ವಯಸ್ಸಿನ ಮಹಿಳೆಯರು ಶೇ.87, 55-64 ವಯಸ್ಸಿನ ಮಹಿಳೆಯರು ಶೇ.47ರಷ್ಟು ಸಂಚಾರಕ್ಕೆ ಭಾರತ ಸೇಫ್ಎಂದು ತಿಳಿಸಿದ್ದಾರೆ. ಸುಮಾರು 20,000 ಮಹಿಳೆಯರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.
Advertisement