ಸರಕಾರ್ಯವಾಹ ಹೊಸಬಾಳೆ? ಇಂದಿನಿಂದ ನಾಗ್ಪುರದಲ್ಲಿ ಆರ್‍ಎಸ್‍ಎಸ್ ಮಹಾಧಿವೇಶನ

ಕಾಶ್ಮೀರದ ತಲೆನೋವು, ಘರ್‍ವಾಪಸಿಯ ವಿವಾದದ ನಡುವೆಯೇ ಶುಕ್ರವಾರದಿಂದ ಆರ್‍ಎಸ್ಎಸ್‍ನ 3 ದಿನಗಳ ಚಿಂತನ ಮಂಥನ ಆರಂಭವಾಗಲಿದೆ...
ಆರ್ ಎಸ್ ಎಸ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ
ಆರ್ ಎಸ್ ಎಸ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ
Updated on

ನಾಗ್ಪುರ: ಕಾಶ್ಮೀರದ ತಲೆನೋವು, ಘರ್‍ವಾಪಸಿಯ ವಿವಾದದ ನಡುವೆಯೇ ಶುಕ್ರವಾರದಿಂದ ಆರ್‍ಎಸ್ಎಸ್‍ನ 3 ದಿನಗಳ ಚಿಂತನ ಮಂಥನ ಆರಂಭವಾಗಲಿದೆ.

ಪ್ರಮುಖವಾಗಿ ಪ್ರಧಾನ ಕಾರ್ಯದರ್ಶಿ ಅಥವಾ ಸರಕಾರ್ಯವಾಹರಾಗಿ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಮೂರ್ನಾಲ್ಕು ತಿಂಗಳುಗಳಿಂದಲೇ ಈ ಬಗ್ಗೆ ಸುದ್ದಿ ಹರಡಿತ್ತಾದರೂ, ಮಾರ್ಚ್‍ನಲ್ಲಿ ನಡೆಯಲಿರುವ ಪ್ರತಿನಿಧಿಸಭಾದಲ್ಲಿಯೇ ಈ ಬದಲಾವಣೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಶುಕ್ರವಾರದಿಂದ ಆರಂಭವಾಗಲಿರುವ ಈ ಮಹಾ ಸಮಾವೇಶದಲ್ಲಿಯೇ ಹೊಸಬಾಳೆ ಅವರನ್ನು ಆಯ್ಕೆ ಮಾಡುವುದು ನಿಶ್ಚಿತ ಎನ್ನಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಮಾಪ್ತರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಹೊಸ ತಲೆಮಾರಿನ ಸಂಘಟಕ. ಸುರೇಶ್ ಭಯ್ಯಾಜಿ ಜೋಶಿ ಅವರ ಸ್ಥಾನಕ್ಕೆ ತರುವ ಮೂಲಕ, ಹೊಸಬಾಳೆ ಅವರನ್ನು ಮುಂದಿನ ಸರಸಂಘಚಾಲಕರಾಗಿ ನೇಮಕ ಮಾಡುವ ಸಾಧ್ಯತೆಗಳಿವೆ. ಈ ಮೂಲಕ ಆರ್‍ಎಸ್‍ಎಸ್ ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯ ರೂಪಿಸುವುದು ಮೋದಿ ಅವರ ಆಶಯ. ಇದರ ಜೊತೆಗೆ ಆರ್‍ಎಸ್‍ಎಸ್‍ನ ಇನ್ನಿತರ ಸ್ಥಾನಗಳಿಗೂ ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಕಾಶ್ಮೀರವೇ ಚರ್ಚೆ: ಮೂರು ದಿನಗಳ ಸಮಾವೇಶದಲ್ಲಿ ಆರ್‍ಎಸ್‍ಎಸ್‍ನ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕಾಶ್ಮೀರದ ಬಿಜೆಪಿ ಮತ್ತು ಪಿಡಿಪಿ ನಡುವಿನ ದೋಸ್ತಿ ಕುರಿತಂತೆ ಚರ್ಚೆ ನಡೆಯಲಿದೆ. ಈ ದೋಸ್ತಿಗೆ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸಿಕೊಂಡು ಬಂದಿರುವ ಆರ್‍ಎಸ್‍ಎಸ್ ನಾಯಕರು ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲಿದ್ದಾರೆ. ಇದರ ಜತೆಗೆ ದೆಹಲಿ ಸೋಲಿನ ಚರ್ಚೆ, ಘರ್ ವಾಪಸಿ ಕುರಿತ ವಿವಾದ ಕುರಿತಂತೆಯೂ ಚರ್ಚೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com