ಸನ್ಯಾಸಿನಿ ಮೇಲೆ ಗ್ಯಾಂಗ್‌ರೇಪ್, ಸಿಐಡಿ ತನಿಖೆಗೆ ಪ.ಬಂಗಾಳ ಸಿಎಂ ಆದೇಶ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಂಗ್ನಪುರದಲ್ಲಿ ಹಿರಿಯ ಸನ್ಯಾಸಿನಿಯೊಬ್ಬರ ಮೇಲೆ ದರೋಡೆಕೋರರು ಸಾಮೂಹಿಕ ಅತ್ಯಾಚಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಣಾಘಾಟ್/ಕೊಲ್ಕತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಂಗ್ನಪುರದಲ್ಲಿ ಹಿರಿಯ ಸನ್ಯಾಸಿನಿಯೊಬ್ಬರ ಮೇಲೆ ದರೋಡೆಕೋರರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಘಟನೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ರಾಣಾಘಾಟ್ ಕಾನ್ವೆಂಟ್ ಸನ್ಯಾಸಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪಶ್ಚಿಮ ಬಂಗಾಳ ಸಿಎಂ, ಇದೊಂದು ಭಯಾನಕ ಕೃತ್ಯ ಎಂದಿದ್ದಾರೆ. ಅಲ್ಲದೆ ಈ ಕುರಿತು ಸಿಐಡಿ ತನಿಖೆಗೆ ಆದೇಶಿಸಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾ ನ್ಯಾಯಾಧೀಶ ಪಿ.ಬಿ.ಸಲಿಮ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಇದೊಂದು ಹೇಯ ಕೃತ್ಯವಾಗಿದ್ದು, ಪೊಲೀಸರು ಈಗಾಗಲೇ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಹೇಳಿದರು.

ಇಂದು ಬೆಳಗಿನ ಜಾವ 12.30ರ ಸುಮಾರಿಗೆ ರಾಣಾಘಾಟ್ ಕಾನ್ವೆಂಟ್‌ಗೆ ನುಗ್ಗಿದ ದರೋಡೆಕೋರರ ಗುಂಪು, 12 ಲಕ್ಷ ರುಪಾಯಿ ದೋಚಿದ್ದಾರೆ. ಈ ವೇಳೆ ಗುಂಪಿನ ಮೂರ್ನಾಲ್ಕು ಮಂದಿ ಅಲ್ಲಿನ ಸನ್ಯಾಸಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರತಿಭಟನೆಗಿಳಿದ ಕಾನ್ವೆಂಟ್‌ನ ವಿದ್ಯಾರ್ಥಿಗಳು, ರಾಷ್ಟ್ರೀಯ ಹೆದ್ದಾರಿ 34 ಅನ್ನು ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com