
ನವದೆಹಲಿ: ದಕ್ಷಿಣ ಭಾರತ ಮಹಿಳೆಯರು ಕಪ್ಪಗಿದ್ದರೂ ಸುಂದರಿಯಾಗಿರುತ್ತಾರೆ ಎಂದು ರಾಜ್ಯಸಭೆಯಲ್ಲಿ ಮಹಿಳೆ ಬಣ್ಣ ಕುರಿತು ವರ್ಣನೆ ಮಾಡಿದ ಜೆಡಿಯು ನಾಯಕ ಶರದ್ ಯಾದವ್ ಟೀಕೆಗೊಳಗಾಗಿದ್ದಾರೆ.
ವಿಮಾ ಮಸೂದೆ ಕುರಿತು ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ ಶರದ್ ಯಾದವ್, ಮಸೂದೆ ಬಗ್ಗೆ ಹೇಳಿಕೆ ನೀಡುವುದರ ಬದಲು ದಕ್ಷಿಣ ಭಾರತದ ಮಹಿಳೆಯರ ಬಣ್ಣ ಮತ್ತು ದೇಹದ ಬಗ್ಗೆ ವರ್ಣನೆ ಮಾಡುತ್ತಿದ್ದರು.
ದಕ್ಷಿಣ ಭಾರತದ ಮಹಿಳೆಯರು ಕಪ್ಪಗಿದ್ದರೂ ಅವರು ಅಷ್ಟೇ ಸುಂದರವಾಗಿರುತ್ತಾರೆ ಅಲ್ಲದೇ ನೃತ್ಯವೂ ಬರುತ್ತದೆ. ಅಂಥಹ ಮಹಿಳೆಯರು ಇಲ್ಲಿ ಕಾಣ ಸಿಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯಿಂದ ಸದನ ಕೆಲವು ಕಾಲ ನಗೆಗಡಲಲ್ಲಿ ಮುಳುಗಿತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುವುದರಲ್ಲಿ ಅನೇಕ ಸದಸ್ಯರು ವಿಫಲವಾದರು. ಕೇವಲ ಡಿಎಂಕೆ ಸದಸ್ಯೆ ಕನಿಮೊಳಿ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಭಾಪತಿ ಪೀಠದಲ್ಲಿದ್ದ ಸಿಪಿಎಂ ಸದಸ್ಯ ಪಿ. ರಾಜೀವ್, ಯಾದವ್ ಅವರನ್ನು ತಡೆಯಲು ಯತ್ನಿಸಲಿಲ್ಲ. ಒಂದೆರಡು ಸಲ ವಿಷಯದ ಮೇಲೆ ಮಾತನಾಡುವಂತೆ ಸಲಹೆ ಮಾಡಿದರಾದರು ಅವರ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದ ಯಾದವ್ ಮಾತು ಮುಂದುವರಿಸಿದರು.
ದಕ್ಷಿಣದ ಮಹಿಳೆಯರ ಬಣ್ಣ ದ ಕುರಿತೂ ಉಲ್ಲೇಖಿಸಿದ ಶರದ್ ಯಾದವ್, ಆಕರ್ಷಕ ಬಣ್ಣಕ್ಕೆ ಮರುಳಾಗುವುದು ನಮ್ಮ ಗುಣ. ನಿಮ್ಮ ದೇವರು ರವಿಶಂಕರ ಪ್ರಸಾದ್ ಅವರಂತೆ ಕಪ್ಪು. ಆದರೆ, ವಿವಾಹ ಹೊಂದಾಣಿಕೆ ಜಾಹೀರಾತುಗಳಲ್ಲಿ ಬಿಳಿ ಬಣ್ಣದ ಹುಡುಗಿ ಬೇಕೆಂದು ಕೇಳುತ್ತೀರಿ ಎಂದು ಜೆಡಿಯು ಮುಖಂಡ ತಮಾಷೆ ಮಾಡಿದರು. ಈ ಸಂದರ್ಭದಲ್ಲಿ ರವಿಶಂಕರ್ ಪ್ರಸಾದ್ ಅಲ್ಲೇ ಹಾಜರಿದ್ದರು.
ನಿರ್ಭಯಾ ಅತ್ಯಾಚಾರ ಪ್ರಕರಣ ಆಧರಿಸಿ ‘ಇಂಡಿಯಾಸ್ ಡಾಟರ್’ ಸಾಕ್ಷ್ಯಚಿತ್ರ ನಿರ್ಮಿಸಿರುವ ಲೆಸ್ಲಿ ಉಡ್ವಿನ್ ಅವರೂ ಬಿಳಿ ಬಣ್ಮವದವರಾದ್ದವರಿಂದ ಸುಲಭವಾಗಿ ಅನುಮತಿ ದೊರೆತಿದೆ ಎಂದು ಶರದ್ ಯಾದವ್ ಹಾಸ್ಯ ಮಾಡಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕನಿಮೋಳಿ, ಯಾದವ್ ಅವರ ಹೇಳಿಕೆಗೆ ಆಕ್ಷೇಪಿಸಿದರು. ಲಘುವಾದ ವಿಷಯಗಳನ್ನು ಚರ್ಚಿಸುವುದರಲ್ಲಿ ತಪ್ಪಿಲ್ಲ ಎಂದು ಜೆಡಿಯು ಮುಖಂಡ ಅವರ ಆಕ್ಷೇಪವನ್ನು ತಳ್ಳಿಹಾಕಿದರು.
ಮಹಿಳೆಯರ ಬಣ್ಣ ಕುರಿತು ಹಗುರವಾಗಿ ಮಾತನಾಡಿರುವ ಜೆಡಿಯು ಮುಖಂಡ ಕ್ಷಮೆ ಯಾಚಿಸಬೇಕೆಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಆಗ್ರಹಿಸಿದ್ದಾರೆ.
Advertisement